ಕುಷ್ಟಗಿ (ಕೊಪ್ಪಳ): ದೇಶಾದ್ಯಂತ ಅನ್ಲಾಕ್ ಪ್ರಕ್ರಿಯೆ ಶುರುವಾಗಿದೆ. ಆದರೆ ಕೊರೊನಾ ಕರಿಛಾಯೆಯಿಂದ ವೃತ್ತಿನಿರತ ಛಾಯಾಗ್ರಾಹಕರ ಜೀವನ ಅತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕುಷ್ಟಗಿ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಸಂಘದಿಂದ ತಹಶೀಲ್ದಾರ ಎಂ. ಸಿದ್ದೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್-19 ವೈರಸ್ ಬಂದಾಗಿನಿಂದ ವೃತ್ತಿನಿರತ ಛಾಯಗ್ರಾಹಕರಿಗೆ ಕೆಲಸವೇ ಇಲ್ಲದಂತಾಗಿದೆ. 2020ರ ವರ್ಷಾಂತ್ಯದವರೆಗೂ ಮದುವೆ ಮತ್ತಿತ್ತರ ಕಾರ್ಯಕ್ರಮಗಳು ಸಿಗದೆ ಕಂಗಾಲಾಗಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ವೃತ್ತಿನಿರತರ 8 ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಅಸಂಘಟಿತ ವಲಯದ ಹಲವು ವರ್ಗಗಳಿಗೆ ಪ್ಯಾಕೇಜ್ ಪರಿಹಾರ ಘೋಷಿಸಿದ್ದು, ಛಾಯಾಗ್ರಾಹಕ ವರ್ಗವನ್ನು ಸಹ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅಕ್ಟೋಬರ್ 31ರಂದು ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಮಹೇಂದ್ರ ಹಡಗಲಿ ತಿಳಿಸಿದರು.