ಕೊಪ್ಪಳ: ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್ಸಿ ಅನ್ನೋದು ಅತ್ಯಂತ ಪ್ರಮುಖವಾದ ಘಟ್ಟ. ಹೀಗಾಗಿ, 10ನೇ ತರಗತಿಯಲ್ಲಿನ ಬಹುತೇಕ ವಿದ್ಯಾರ್ಥಿಗಳ ಹಗಲು-ರಾತ್ರಿಯನ್ನದೆ ಓದಿ ಹೆಚ್ಚಿನ ಅಂಕಗಳನ್ನು ಪಡೆಯಲು ಶ್ರಮಿಸುತ್ತಾರೆ. ಜಿಲ್ಲೆಯ ಮೂರು ಗ್ರಾಮಗಳಲ್ಲಿ ಈ ವರ್ಷ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮನೆಗಳಲ್ಲಿ ಪಾಲಕರು ಟಿವಿ ಡಿಶ್ಅನ್ನು ಡಿಸ್ಕನೆಕ್ಟ್ ಮಾಡಿಸುವ ಮೂಲಕ ಮಕ್ಕಳ ಓದಿಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದಾರೆ.
3 ಗ್ರಾಮಗಳಲ್ಲಿ TV ಬಂದ್!
ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಕೊಪ್ಪಳ ಎಸ್ಎಸ್ಎಲ್ ಫಲಿತಾಂಶ ಯಾವಾಗಲೂ ಕಡಿಮೆಯಿರುತ್ತದೆ. ಜಿಲ್ಲೆಯಲ್ಲಿ ಎಸ್ಎಸ್ಎಲ್ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಡುವೆ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮನೆಗೆ ಹೋಗಿ ಅವರ ಕಲಿಕೆಗೆ ಉತ್ತೇಜನ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಕೊಪ್ಪಳ ತಾಲೂಕಿನ ಮೂರು ಗ್ರಾಮಗಳ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಟಿವಿಗಳನ್ನು ಮೂಲೆಗೊತ್ತಿದ್ದಾರೆ.
ಓದಿನತ್ತ ಮಕ್ಕಳ ಚಿತ್ತ!
ಜಿಲ್ಲೆಯ ಮೈನಳ್ಳಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ 50 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳು ಮೈನಳ್ಳಿ, ಬಿಕನಳ್ಳಿ ಹಾಗೂ ಹಂದ್ರಾಳ ಗ್ರಾಮದರು. ಎಸ್ಎಸ್ಎಲ್ಸಿ ಓದುತ್ತಿರುವ ತಮ್ಮ ಮಕ್ಕಳು ಈ ಬಾರಿ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಮನೆಯಲ್ಲಿ ಟಿವಿಗಳು ಇದ್ದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನಾನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಈ ಮೂರು ಗ್ರಾಮಗಳ ಪಾಲಕರು ಕಳೆದ 15 ದಿನಗಳಿಂದ ತಮ್ಮ ಮನೆಯಲ್ಲಿನ ಟಿವಿಯ ಡಿಶ್ಅನ್ನು ಡಿಸ್ಕನೆಕ್ಟ್ ಮಾಡಿಸಿ, ತಮ್ಮ ಮಕ್ಕಳ ವ್ಯಾಸಂಗಕ್ಕೆ ಪೂರಕ ವಾತಾವರಣ ಕಲ್ಪಿಸಿ ಉತ್ತೇಜನ ನೀಡುತ್ತಿದ್ದಾರೆ.
ಮೂರು ತಿಂಗಳವರೆಗೆ ಡಿಶ್ ಹಾಕಿಸಿಕೊಳ್ಳುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಬೆಳಗ್ಗೆ ಬೇಗನೆ ಎದ್ದು ವ್ಯಾಸಂಗ ಮಾಡುತ್ತಾರೆ. ರಾತ್ರಿಯೂ ಸಹ ಹೆಚ್ಚು ಹೊತ್ತಿನವರೆಗೆ ಯಾವುದೇ ಅನಾನುಕೂಲವಿಲ್ಲದೆ ಅಭ್ಯಾಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ ಪ್ರತಿಕ್ರಿಯಿಸಿ, ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸಲು ಮಕ್ಕಳ ಮನೆಗೆ ತೆರಳುತ್ತಿದ್ದೇವೆ. ಹೀಗೆ, ಮೈನಳ್ಳಿಗೆ ಹೋಗಿದ್ದ ಸಂದರ್ಭದಲ್ಲಿ ಮಕ್ಕಳಿಗೆ ಓದುವ ವಾತಾವರಣ ನಿರ್ಮಾಣ ಮಾಡಿಕೊಡಲು ಪಾಲಕರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಅದರಂತೆ ಪಾಲಕರು ಅರ್ಥ ಮಾಡಿಕೊಂಡು ಈಗ ಮನೆಯಲ್ಲಿ ಓದುವ ವಾತಾವರಣ ನಿರ್ಮಾಣ ಮಾಡಿರೋದು ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ ಎಂದಿದ್ದಾರೆ.
ಓದಿ: ಬಿಎಸ್ವೈ ಕುಳಿತಿರುವ ಹಡಗೇ ಈಗ ಮುಳುಗುತ್ತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ