ಕುಷ್ಟಗಿ: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಪೋಲಿಸರು, ಗೃಹರಕ್ಷಕರು ಸರ್ಕಾರದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕುಷ್ಟಗಿ ಜನ ಈಗಿನ ಪರಿಸ್ಥಿತಿಯಲ್ಲಿ ತಮ್ಮ ನಾಗರಿಕ ಕರ್ತವ್ಯ ಮರೆಯುತ್ತಿದ್ದಾರೆ.
ಇಲ್ಲಿನ ಹಳೆ ಪ್ರವಾಸಿ ಮಂದಿರದ ಎದುರಿನಲ್ಲಿರುವ ಸಂತೆ ಮೈದಾನದಲ್ಲಿ ನಿತ್ಯ ಕಾಯಿಪಲ್ಲೆ (ಬೀಟ್) ಹರಾಜು ನಡೆಯುತ್ತದೆ. ರೈತರು, ದಲ್ಲಾಲಿಗಳು, ವ್ಯಾಪಾರಿಗಳು, ಗ್ರಾಹಕರು ಕೊರೊನಾ ವೈರಸ್ ಚಿಂತೆ ಇಲ್ಲದೇ ವ್ಯವಹರಿಸುತ್ತಿದ್ದಾರೆ. ಸಾಮಾಜಿಕ ಅಂತರ ಅನ್ನೋ ಪದವೇ ಇಲ್ಲಿನ ನಿತ್ಯ ಸೇರುವ ಜನರ ಅರಿವಿಗೆ ಬಂದಿಲ್ಲ. ಪ್ರತಿದಿನ ಇಲ್ಲಿನ ಸಂತೆ ಮೈದಾನದಲ್ಲಿ ಕಾಯಿಪಲ್ಲೆ ಹರಾಜಿನ ಸಂದರ್ಭದಲ್ಲಿ ಜನಜಂಗುಳಿ ಕಂಡು ಬರುತ್ತಿದೆ.
ಬೆಳಗಿನ ಜಾವ ರೈತರು ತರಕಾರಿಗಳನ್ನು ಹರಾಜಿಗೆ ಇಟ್ಟು, ಸಿಕ್ಕಷ್ಟು ಅದಾಯದೊಂದಿಗೆ ತಮ್ಮೂರುಗಳಿಗೆ ವಾಪಸ್ಸಾಗುತ್ತಿದ್ದಾರೆ. ರೈತರಿಂದ ಖರೀದಿಸಿದ ಕೃಷಿ ಉತ್ಪನ್ನಗಳನ್ನು ದಲ್ಲಾಲಿಗಳು ಸ್ಥಳೀಯ ಹಾಗೂ ಗ್ರಾಮೀಣ ವ್ಯಾಪಾರಸ್ಥರಿಗೆ ಮಾರುವ ಪ್ರಕ್ರಿಯೆ ಎರಡ್ಮೂರು ತಾಸುಗಳಲ್ಲಿ ಮುಗಿದು ಹೋಗುತ್ತಿದ್ದರೂ, ಕೊರೊನಾ ವೈರಸ್ ಭೀತಿ ಇಲ್ಲದೇ ವ್ಯವಹರಿಸುತ್ತಿದ್ದಾರೆ. ಮಾಸ್ಕ್ ಹಾಕಿದರೆ ವೈರಸ್ ಹರಡುವುದಿಲ್ಲ ಎನ್ನುವ ಭ್ರಮೆಯಲ್ಲಿ ಸಾಮಾಜಿಕ ಅಂತರವನ್ನು ಮರೆಯುತ್ತಿದ್ದಾರೆ. ಕೆಲ ತಾಸುಗಳ ಲಾಕ್ಡೌನ್ ಸಡಿಲಿಕೆ ಈ ರೀತಿಯಿಂದ ದುರಪಯೋಗವಾಗುತ್ತಿದೆ.
ಶನಿವಾರ ಬೆಳಗಿನ ಜಾವ ಮಳೆಯಾಗಿದ್ದರಿಂದ ಕೆಸರಿನಲ್ಲಿಯೇ ವ್ಯವಹರಿಸುತ್ತಿರುವುದು ಕಂಡು ಬಂತು. ಬೆಳಗ್ಗೆ 6.30ರ ವೇಳೆಗೆ ಸ್ಥಳಕ್ಕೆ ಪಿಎಸೈ ಚಿತ್ತರಂಜನ್ ನಾಯಕ್ ಬರುತ್ತಿದ್ದಂತೆ ಸೇರಿದ್ದ ಜನರನ್ನು ಚದುರಿಸಿದರು. ಈ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪೊಲೀಸರು, ಗೃಹರಕ್ಷಕರು ಬರುವರೆಗೂ ಕಾಲ್ತೆಗೆಯುವುದಿಲ್ಲ. ಪುರಸಭೆ ಸಿಬ್ಬಂದಿಗಳ ಎಚ್ಚರಿಕೆ ಮಾತುಗಳೂ ಇವರಿಗೆ ನಾಟುತ್ತಿಲ್ಲ.