ಕೊಪ್ಪಳ: ಈಗ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಈ ಹಿಂದಿನ ಸಾಮಾನ್ಯ ಕಾಯಿಲೆಗಳು ಜನರಲ್ಲಿ ಇದ್ದರೂ ಸಹ ಗೌಣವಾಗಿವೆ. ಈ ಹಿಂದೆ ಸಾಮಾನ್ಯ ಕಾಯಿಲೆಗೆ , ಬೇರೆ ಬೇರೆ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಹೊರ ರೋಗಿಗಳು ದೊಡ್ಡ- ದೊಡ್ಡ ಆಸ್ಪತ್ರೆಗಳಿಗೆ ಬರುವುದು ಸಹ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರಸ್ತುತ ಸ್ಥಿತಿ ಹೇಗಿದೆ ಎಂಬುದರ ಕುರಿತ ವರದಿ ಇಲ್ಲಿದೆ .
ಕೊರೊನಾ ಭೀತಿ ಜನರನ್ನು ಆವರಿಸಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕು ದಿನೇ ದಿನೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸುತ್ತಿದೆ. ಕೊರೊನಾ ಇಲ್ಲದ ಸಂದರ್ಭದಲ್ಲಿ ಹೊರ ರೋಗಿಗಳಿಂದ ತುಂಬಿ ತುಳುಕುತ್ತಿದ್ದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಈಗ ಕೊರೊನಾದಿಂದಾಗಿ ಹೊರ ರೋಗಿಗಳ ಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಇಳಿಮುಖವಾಗಿದೆ.
ಮಧುಮೇಹ, ರಕ್ತದೊತ್ತಡ, ಥೈರಾಯಿಡ್, ಸಾಮಾನ್ಯ ಶೀತ, ಜ್ವರ ಸೇರಿದಂತೆ ಇತರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಾಗೂ ರೆಗ್ಯುಲರ್ ಚೆಕ್ ಅಪ್ ಗಾಗಿ ಜನರು ಆಸ್ಪತ್ರೆಗಳಿಗೆ ಬರುತ್ತಿದ್ದರು. ಆದರೆ ಕೊರೊನಾ ಭೀತಿಯಿಂದ ಆಸ್ಪತ್ರೆಗಳತ್ತ ಮುಖ ಮಾಡೋದು ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಸುಮಾರು 270 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಚಿಕಿತ್ಸೆ ನೀಡುತ್ತಿರುವುದರಿಂದ ಬಹುಪಾಲು ಖಾಸಗಿ ಆಸ್ಪತ್ರೆಗಳಲ್ಲಿ ಈ ಮೊದಲಿನಂತೆ ಹೊರರೋಗಿಗಳ ಸಂಖ್ಯೆ ಕಂಡು ಬರುತ್ತಿಲ್ಲ. ಕಾಯಿಲೆಗಳೇನು ಕಡಿಮೆಯಾಗಿಲ್ಲ. ಆದರೆ ಯಾವುದೇ ಚಿಕಿತ್ಸೆಗೆ ಹೋದರೂ ತಮಗೆಲ್ಲಿ ಪಾಸಿಟಿವ್ ಬರುತ್ತದೆಯೋ ಎಂಬ ಭಯ ಜನರಲ್ಲಿ ಬೇರೂರಿದೆ. ಅಲ್ಲದೆ ಬೇರೆ ಬೇರೆ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯೋರು ಕಡಿಮೆಯಾಗಿದ್ದಾರೆ. ಈ ಮೊದಲು 100 ಜನ ಹೊರ ರೋಗಿಗಳನ್ನು ಚೆಕ್ ಅಪ್ ಮಾಡುತ್ತಿದ್ದ ಆಸ್ಪತ್ರೆಗಳಲ್ಲಿ ಈಗ 50 ಜನ ರೋಗಿಗಳು ಬರುತ್ತಿದ್ದಾರೆ. ಕೊರೊನಾ ಭಯದಿಂದಾಗಿ ಕೆಲವರು ಆನ್ ಲೈನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಾರೆ ಕೊಪ್ಪಳದ ಕೆ.ಎಸ್. ಆಸ್ಪತ್ರೆಯ ತಜ್ಞ ವೈದ್ಯ ಡಾ. ಕೆ. ಬಸವರಾಜ ಅವರು.
ಇದು ಜಿಲ್ಲೆಯ ಕೆಲ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಪ್ರಸ್ತುತ ದೃಶ್ಯವಾದರೆ , ಕೆಲ ಆಸ್ಪತ್ರೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಕೆಲ ಖಾಸಗಿ ಆಸ್ಪತ್ರೆಗಳ ವೈದ್ಯರಿಗೂ ಸೋಂಕು ತಗುಲಿರುವುದರಿಂದ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಈಗ ಕ್ಲಿನಿಕ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಸಾಮಾನ್ಯ ಅನಾರೋಗ್ಯ ಸೇರಿ ಇನ್ನಿತರೆ ಕಾಯಿಲೆಗಳ ಚಿಕಿತ್ಸೆಗೆ ಜನಸಾಮಾನ್ಯರಿಗೆ ಹತ್ತಿರವಾಗಿರುವ ಕೆಲ ಕ್ಲಿನಿಕ್ ಗಳಲ್ಲಿ ಕಳೆದೊಂದು ತಿಂಗಳಿನಿಂದ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.
ಈ ಎಲ್ಲ ಅಂಶಗಳನ್ನು ಅವಲೋಕಿಸಿದಾಗ ಈ ಹಿಂದಿನ ಬೇರೆ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜನರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗೋದನ್ನು ಕಡಿಮೆ ಮಾಡಿದ್ದಾರೆ. ಅಲ್ಲದೆ ನಗರ ಪ್ರದೇಶದ ಕೆಲವರು ಆನ್ಲೈನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದರೆ, ಗ್ರಾಮೀಣ ಪ್ರದೇಶದ ಬಹುಪಾಲು ಜನರು ತಮಗೆ ಹತ್ತಿರವಾಗಿರುವ ಮತ್ತು ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುವ ಕ್ಲಿನಿಕ್ಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿರೋದು ಕಂಡು ಬರುತ್ತಿದೆ.