ಕೊಪ್ಪಳ: ಅನಾಥ ವ್ಯಕ್ತಿಯೊಬ್ಬರಿಗೆ ಕೊಪ್ಪಳದ ಕಿಮ್ಸ್ ವೈದ್ಯರು ಚಪ್ಪೆಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು, ವ್ಯಕ್ತಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದ ಪ್ರಹ್ಲಾದ್ ದೇಸಾಯಿ (60) ಎಂಬ ವೃದ್ಧರೊಬ್ಬರು ಚಪ್ಪೆ ಮುರಿತಕ್ಕೊಳಗಾಗಿ ಹಾಸಿಗೆ ಹಿಡಿದಿದ್ದರು. ಈ ವ್ಯಕ್ತಿ ತನಗೆ ಕುಟುಂಬದವರು ಯಾರೂ ಇಲ್ಲದ ಕಾರಣ ವೃದ್ಧಾಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದರು. ಚಪ್ಪೆ ಮುರಿತಕ್ಕೊಳಗಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದ ವೃದ್ಧನನ್ನು ಅನಾಥಾಶ್ರಮದ ಸಿಬ್ಬಂದಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇವರು ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಯನ್ನು ಹೊಂದಿಲ್ಲ. ಹೀಗಾಗಿ, ಸರ್ಕಾರದ ಆರೋಗ್ಯ ಸ್ಕೀಂನಲ್ಲಿ ಆಪರೇಷನ್ ಮಾಡಲು ಸಾಧ್ಯವಾಗಲಿಲ್ಲ.

ಹೀಗಾಗಿ ಮೆಡಿಕಲ್ ಕಾಲೇಜ್ ನಿರ್ದೇಶಕ ವೈಜನಾಥ ಇಟಗಿ ಅವರು, ಎಲುಬು, ಕೀಲು ತಜ್ಞ ಡಾ. ವಿಜಯ್ ಸುಂಕದ್ ಅವರೊಂದಿಗೆ ಚರ್ಚಿಸಿ ಕಾಲೇಜಿನ ವಿಶೇಷ ನಿಧಿ ಬಳಸಿಕೊಂಡು ವೃದ್ಧನಿಗೆ ಆಪರೇಷನ್ ಮಾಡಿದ್ದಾರೆ. ಈಗ ವೃದ್ಧ ವಾಕರ್ ಸಹಾಯದೊಂದಿಗೆ ಎಲ್ಲರಂತೆ ನಡೆದಾಡಲಾರಂಭಿಸಿದ್ದಾರೆ. ಕಿಮ್ಸ್ನ ವೈದ್ಯರ ಹಾಗೂ ಜಿಲ್ಲಾಸ್ಪತ್ರೆ ಸಿಬ್ಬಂದಿಯ ಕಾರ್ಯಕ್ಕೆ ವೃದ್ಧ ಈಗ ಕೃತಜ್ಞತೆ ಸಲ್ಲಿಸಿದ್ದಾನೆ.