ಗಂಗಾವತಿ : ದಕ್ಷತೆ ಹಾಗೂ ಪ್ರಾಮಾಣಿಕ ಕೆಲಸ ಮಾಡುವ ನಾನಾ ಇಲಾಖೆಗಳಲ್ಲಿನ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ವ್ಯವಸ್ಥಿತ ದಂಧೆ ಜಿಲ್ಲೆಯಲ್ಲಿ ನಡೆದಿದೆ. ಕೂಡಲೇ ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ತಡೆಯಬೇಕು ಎಂದು ಆಗ್ರಹಿಸಿ ಕಾರಟಗಿ ಪಟ್ಟಣದಲ್ಲಿ ಕನ್ನಡ ಪರ ಸಂಘಟನೆ ಪ್ರತಿಭಟನೆ ನಡೆಸಿತು.
ಪ್ರತಭಟನೆಯಲ್ಲಿ ಮಾತನಾಡಿದ ಮಾತೃಭೂಮಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಶಾಬುದ್ದೀನ್ ಮುಧೋಳ, ಜಿಲ್ಲೆಯಲ್ಲಿ ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಆಡಳಿತಾರೂಢ ಶಾಸಕರ ಮಾತಿಗೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಈ ಹಿಂದಿನ ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್‌ಕುಮಾರ್ ಸೇರಿ ನಾನಾ ಇಲಾಖೆಯ ಅಧಿಕಾರಿಗಳು ರಾಜಕಾರಣಿಗಳ ಟಾರ್ಗೆಟ್ ಆಗುತ್ತಿದ್ದಾರೆ ಎಂದು ಆರೋಪಿಸಿದರು.
ಗಂಗಾವತಿ ಹಾಗೂ ಕಾರಟಗಿ ತಾಲೂಕಿನಲ್ಲಿ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಅಕ್ರಮ ಮರಳು ದಂಧೆ ನಿಯಂತ್ರಿಸಲು ಯತ್ನಿಸಿದ್ದರ ಫಲವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಸೈಯದ್ ಫಾಜೀಲ್ ಮತ್ತು ಕಾರಟಗಿ ತಹಶೀಲ್ದಾರ್ ಕವಿತಾ ಅವರನ್ನು ಎತ್ತಂಗಡಿ ಮಾಡಲಾಗಿದೆ. ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.