ಗಂಗಾವತಿ(ಕೊಪ್ಪಳ) : ವಿಶ್ವವಿಖ್ಯಾತ ಧಾರ್ಮಿಕ ತಾಣ ಅಂಜನಾದ್ರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಳಶೆಟ್ಟಿ ನೇತೃತ್ವದಲ್ಲಿ ಮಂಗಳವಾರ ಸಂಜೆ ಆನೆಗೊಂದಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸ್ಥಳೀಯರು ಕಾಂಕ್ರಿಟ್ ಮಾದರಿಯ ಅಭಿವೃದ್ಧಿಗೆ ತೀವ್ರ ವಿರೋಧ ವ್ಯಕ್ತಪಡಿದರು.
ಸಭೆ ಆರಂಭವಾಗುತ್ತಿದ್ದಂತೆಯೆ ಸಹಾಯಕ ಆಯುಕ್ತ ಬಸವಣೆಪ್ಪ ಮಾತನಾಡಿ, ಈ ಮೊದಲು 60 ಎಕರೆ ಜಮೀನು ಸ್ವಾಧೀನಕ್ಕೆ ಅಗತ್ಯವಿತ್ತು. ಇದೀಗ ಒಟ್ಟು 72 ಎಕರೆ ಅಗತ್ಯವಿದ್ದು ಇದರಲ್ಲಿ ಪಾರ್ಕಿಂಗ್, 600 ವಸತಿ ಗೃಹ, ಮಾಹಿತಿ ಕೇಂದ್ರ ಸೇರಿದಂತೆ ನಾನಾ ಚಟುವಟಿಕೆ ಕೈಗೊಳ್ಳಲಾಗುವುದು ಎಂದರು. ಆದರೆ ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಭಿವೃದ್ಧಿ ನೆಪದಲ್ಲಿ ಸಾವಿರಾರು ವರ್ಷಗಳ ನೈಸರ್ಗಿಕವಾಗಿ ಕಾಪಾಡಿಕೊಂಡು ಬರಲಾಗಿರುವ ಸಂಪತ್ತು ನಾಶಪಡಿಸುವುದು ಸರ್ಕಾರದ ಉದ್ದೇಶವಿದ್ದಂತೆ ಕಾಣುತ್ತಿದೆ ಎಂದು ವಿರೋಧಿಸಿದರು.
ಸರ್ಕಾರಿ ಭೂಮಿ ಇದ್ದರೂ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿ ಅಭಿವೃದ್ಧಿ ನೆಪದಲ್ಲಿ ಕಾಂಕ್ರಿಟ್ ಕಾಡು ಮಾಡುವುದು ಸರಿಯಲ್ಲ. ವಸತಿ ಗೃಹ ನಿರ್ಮಾಣದ ಬದಲಿಗೆ ಸುತ್ತಲಿನ ನಾಲ್ಕಾರು ಹಳ್ಳಿಗಳಲ್ಲಿ ಹೋಂ ಸ್ಟೇಗೆ ಅವಕಾಶ ನೀಡಿ ಎಂದು ಸ್ಥಳೀಯರು ಒತ್ತಾಯಿಸಿದರು. ಕಳೆದ ಒಂದೂವರೆ ದಶಕದಿಂದ ಮನೆ ಕಟ್ಟಿಕೊಳ್ಳಲು ಹಂಪಿ ಅಭಿವೃದ್ದಿ ಪ್ರಾಧಿಕಾರ ಅನುಮತಿ ನೀಡುತ್ತಿಲ್ಲ. ವಿದ್ಯುತ್ ಸಂಪರ್ಕಕ್ಕೂ ಸಮಸ್ಯೆಯಾಗಿದೆ. ಆದರೆ ಸರ್ಕಾರದ 600 ವಸತಿ ಗೃಹಗಳಿಗೆ ಅದು ಹೇಗೆ ಅವಕಾಶ ನೀಡುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದಂತೆ ಸಭೆಯನ್ನು ಅರ್ಧಕ್ಕೇ ಮೊಟಕುಗೊಳಿಸಲಾಯಿತು.
ಇದನ್ನೂ ಓದಿ : ಅಂಜನಾದ್ರಿ ಅಭಿವೃದ್ಧಿಗೆ ಜಮೀನು ನೀಡದಿರಲು ರೈತರ ನಿರ್ಧಾರ