ಗಂಗಾವತಿ(ಕೊಪ್ಪಳ): ಹನುಮನ ಜನ್ಮ ಭೂಮಿ ಹಾಗೂ ಅಂಜನಾದ್ರಿಯ ಬಗ್ಗೆ ಅನಗತ್ಯ ವಿವಾದ ಹುಟ್ಟುಹಾಕಲಾಗಿದೆ ಎಂದು ತಿರುಮಲ ತಿರುಪತಿ ದೇಗುಲದ ಆಡಳಿತ ಮಂಡಳಿಯ ವಿರುದ್ಧ ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದಾನಂದ ಸರಸ್ವತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತಿ ಶೀಘ್ರ ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಲಾಗುವುದು. ಬಳಿಕ ತಿರುಪತಿಗೆ ತೆರಳಿ ಅಲ್ಲಿಯೂ ಮಾಧ್ಯಮದ ಮೂಲಕ ಅಂಜನಾದ್ರಿಯ ಮೂಲದ ಬಗ್ಗೆ ಪೌರಾಣಿಕೆ ಹಿನ್ನೆಲೆ ಕುರಿತ ಸಾಕ್ಷಿ ನೀಡಲಾಗುವುದು ಎಂದರು.
ಹನುಮನ ಮೂಲದ ಸ್ಥಳದ ಬಗ್ಗೆ ವಿವಾದ ಸೃಷ್ಟಿಸಿರುವುದು ಒಂದು ಷಡ್ಯಂತ್ರ. ಹಿಂದು ಧರ್ಮದ ಗ್ರಂಥಗಳನ್ನು, ಪೌರಾಣಿಕ ಹಿನ್ನೆಲೆಗಳನ್ನು ವಿರೂಪಗೊಳಿಸುವ ಷಡ್ಯಂತ್ರ ನಡೆದಿದೆ ಎಂದು ಸ್ವಾಮೀಜಿ ಆರೋಪಿಸಿದರು.
ಕಳೆದ ವಾರ ಹನುಮನ ಜನ್ಮಸ್ಥಳ ತಿರುಪತಿ ಬಳಿಯಿರುವ ಅಂಜನಾದ್ರೀಯೇ ಹನುಮನ ಜನ್ಮಸ್ಥಳ ಎಂದು ಟಿಟಿಡಿ ಪ್ರಕಟಣೆ ಹೊರಡಿಸಿತ್ತು. ಎಪ್ರಿಲ್ 21ರಂದು ಆಂಜನೇಯನ ಜನ್ಮಸ್ಥಳದ ಬಗ್ಗೆ ಅಧಿಕೃತ ಮಾಹಿತಿ ರಿಲೀಸ್ ಮಾಡಿದ್ದ ಟಿಟಿಡಿ, ಆಕಾಶ ಗಂಗಾ ಬಳಿಯ ಏಳು ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿ ಬೆಟ್ಟದಲ್ಲಿ ಜನ್ಮಸ್ಥಳ ಎಂದು ಹೇಳಿಕೊಂಡಿತ್ತು. ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಆಚಾರ್ಯ ಮುರುಳೀಧರ ಶರ್ಮಾ ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದರು.