ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಕೋವಿಡ್ 19 ಸೋಂಕಿನ ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ಹೇಳಿದರು.
ಪಾಸಿಟಿವ್ ಪ್ರಕರಣಗಳು ಇಲ್ಲದೆ ಇರುವುದರಿಂದ ಜಿಲ್ಲೆಯ ಜನರಲ್ಲಿ ನಿರಾಳತೆ ಮೂಡುತ್ತಿದೆ. ಮೇ 22ರ ಸಂಜೆಯವರೆಗಿನ ಮಾಹಿತಿ ಪ್ರಕಾರ ಯಾವುದೇ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಮೇ 21ರ ಸಂಜೆಯ ವೇಳೆಯವರೆಗೂ ಬಾಕಿ ಇದ್ದ 876 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿ ವರದಿಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ದೃಢಪಟ್ಟಿಲ್ಲ. ಮೇ 22 ಸಂಜೆಯವರೆಗೆ 173 ಜನರ ಗಂಟಲು ಹಾಗೂ ರಕ್ತದ ಮಾದರಿಯ ವರದಿ ಬರಬೇಕಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 3,289 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳಿಸಲಾಗಿದೆ. ಈ ಪೈಕಿ 3,113 ಜನರ ವರದಿ ನೆಗಟಿವ್ ಬಂದಿದೆ. ಮೂವರಿಗೆ ಸೋಂಕು ತಗುಲಿರುವುದು ಮೇ 18ರಂದು ದೃಢವಾಗಿದೆ. 173 ಜನರ ವರದಿ ಬರಬೇಕಿದೆ. ಈ 173 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಇಂದು ಸಂಗ್ರಹಿಸಿ ಕಳಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದರು.
ಮೇ 21ರ ಸಂಜೆಯವರೆಗೆ ಒಟ್ಟು 876 ಜನರ ವರದಿ ಬಾಕಿ ಇತ್ತು. ಅವುಗಳಲ್ಲಿ ಎಷ್ಟು ಪಾಸಿಟಿವ್ ಪ್ರಕರಣಗಳು ಬರುತ್ತವೆಯೋ ಏನೋ ಎಂದು ಜನರು ಆತಂಕಕ್ಕೆ ಒಳಗಾಗಿದ್ದರು. ಬಾಕಿ ಇದ್ದ ಎಲ್ಲ 876 ಜನರ ವರದಿಗಳು ನೆಗಟಿವ್ ಎಂದು ಬಂದಿವೆ. ಇಂದು ಕಳಿಸಿರುವ 173 ಜನರ ಮಾದರಿಗಳ ವರದಿಯಷ್ಟೇ ಬಾಕಿ ಇದೆ ಎಂದು ಮಾಹಿತಿ ನೀಡಿದರು.