ಕುಷ್ಟಗಿ (ಕೊಪ್ಪಳ): ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರದ ಸಮಯೋಚಿತ ಹಾಗೂ ದಿಟ್ಟ ಕ್ರಮ ಗ್ರಾಮೀಣ ಹಾಲು ಉತ್ಪಾದಕರನ್ನು ಸಂಕಷ್ಟಗಳಿಂದ ಪಾರು ಮಾಡಿದೆ.
ಲಾಕ್ ಡೌನ್ ಸಮಯದಲ್ಲಿ ಹೋಟಲ್, ಖಾನಾವಳಿ ಇತ್ಯಾದಿ ಬಂದ್ ಆಗಿದ್ದಾಗ ನಿತ್ಯ ಸಂಗ್ರಹವಾಗಿರುವ ಹಾಲು ಕೆಡುವುದನ್ನು ಸರ್ಕಾರ ತಪ್ಪಿಸಿದೆ. ರೈತರಿಂದ ಖರೀದಿಸಿದ ಹಾಲನ್ನು ಸರ್ಕಾರ ಲಾಕ್ಡೌನ್ ಸಂದರ್ಭದಲ್ಲಿ ಪಟ್ಟಣ, ನಗರ ವ್ಯಾಪ್ತಿಯ ಕೊಳಚೆ ಪ್ರದೇಶದ ನಿವಾಸಿಗಳಿಗೆ, ಪುನರ್ವಸತಿ ಕೇಂದ್ರಗಳಿಗೆ ನೀಡಿ, ಜನರ ಹಸಿವು ನೀಗಿಸುವುದರ ಜೊತೆಗೆ ಹಾಲು ಉತ್ಪಾದಕರಿಗೂ ನಷ್ಟವಾಗದಂತೆ ನೋಡಿಕೊಂಡಿದೆ.
ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವ್ಯಾಪ್ತಿಯ ಕುಷ್ಟಗಿ ತಾಲೂಕಿನ 68 ಹಾಲು ಉತ್ಪಾದಕರ ಸಂಘಗಳು ಲಾಕ್ ಡೌನ್ ಸಂದರ್ಭ ಹಾಗೂ ಬೇಸಿಗೆಯಲ್ಲಿಯೂ ಸ್ಥಿರತೆ ಉಳಿಸಿಕೊಂಡಿದೆ. ದೈನಂದಿನ ಹಾಲು ಉತ್ಪನ್ನದಲ್ಲಿ 10 ಸಾವಿರದ ಸರಾಸರಿ ಕಾಯ್ದುಕೊಂಡಿದ್ದು, ಸಾಗಾಣಿಕೆಯಲ್ಲಿ ಯಾವುದೇ ಅಡೆ ತಡೆಯಾಗಿಲ್ಲ.
ಕಳೆದ ಫೆಬ್ರವರಿಯಲ್ಲಿ 10,532 ಲೀಟರ್, ಮಾರ್ಚ್ ತಿಂಗಳಿನಲ್ಲಿ 10,400, ಏಪ್ರಿಲ್ನಲ್ಲಿ 10,134, ಮೇ ತಿಂಗಳಿನ 13 ತಾರೀಕಿನವರೆಗೂ 10,243 ಲೀಟರ್ ಹಾಲು ಉತ್ಪನ್ನ ಕುಷ್ಟಗಿ ಹಾಲು ಶೀತಲೀಕರಣ ಕೇಂದ್ರದಲ್ಲಿ ದಾಖಲಾಗಿದೆ.
ಮಾಸಿಕವಾಗಿ 3.22 ಲಕ್ಷ ಲೀಟರ್ನಷ್ಟು ಸರಾಸರಿ ಉತ್ಪನ್ನ ಕಾಯ್ದುಕೊಂಡಿರುವುದು ಗಮನಾರ್ಹವೆನಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಹಾಲು ಖರೀದಿಸದೇ ಇದ್ದಲ್ಲಿ ಹೈನುಗಾರಿಕೆಗೆ ಚೇತರಿಕೊಳ್ಳದಂತಹ ಪೆಟ್ಟು ಬೀಳುತ್ತಿತ್ತು. ಆ ವೇಳೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ದಿಟ್ಟ ನಿರ್ಧಾರ ಹಾಲು ಉತ್ಪಾದಕ ರೈತರನ್ನು ಪಾರು ಮಾಡಿದೆ ಎನ್ನುತ್ತಾರೆ ವಿಸ್ತರ್ಣಾಧಿಕಾರಿ ಬಸವರಾಜ ಯರದೊಡ್ಡಿ.