ಗಂಗಾವತಿ: ನಗರಸಭೆಯ ಸದಸ್ಯೆಯೊಬ್ಬರನ್ನು ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಕಿಡ್ನಾಪ್ ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಇದೀಗ ಟಿಸ್ಟ್ ಸಿಕ್ಕಿದೆ. ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯ ಪತಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ನಾವು ಸೇಫಾಗಿದ್ದೇವೆ ಎಂದು ಸ್ನೇಹಿತರಿಗೆ ರವಾನಿಸಿದ್ದಾರೆ.
ಇಲ್ಲಿನ ನಗರಸಭೆಯ 26ನೇ ವಾರ್ಡ್ನ ಬಿಜೆಪಿ ಬೆಂಬಲಿತ ಸದಸ್ಯೆ ಸುಧಾ ಮತ್ತ ಅವರ ಪತಿ ಸೋಮನಾಥರನ್ನು ಕಾಂಗ್ರೆಸ್ ಸದಸ್ಯರಾದ ಶಾಮೀದ ಮನಿಯಾರ, ಮನೋಹರ ಸ್ವಾಮಿ, ಮುಖಂಡರಾದ ಸೈಯದ್ ಅಲಿ, ಸೋಮನಾಥ ಭಂಡಾರಿ ಹಾಗೂ ಮಲ್ಲಿಕಾರ್ಜುನ ಎಂಬುವರು ಅಪಹರಿಸಿದ್ದರು ಎಂದು ದೂರು ದಾಖಲಾಗಿತ್ತು.
ಇದರ ಬೆನ್ನಲ್ಲೇ ಇದೀಗ ಸದಸ್ಯೆಯ ಪತಿ ಬಿಜೆಪಿ ಮುಖಂಡ ಸೋಮನಾಥ, ವಿಡಿಯೋವೊಂದನ್ನು ಮಾಡಿ ತಮ್ಮ ಸ್ನೇಹಿತರು ಹಾಗೂ ಮಾಧ್ಯಮದವರಿಗೆ ಕಳುಹಿಸಿದ್ದಾರೆ. ನಮ್ಮನ್ನು ಬಿಜೆಪಿಗರಾಗಲಿ, ಕಾಂಗ್ರೆಸ್ಸಿಗರಾಗಲಿ ಯಾರೂ ಕಿಡ್ನಾಪ್ ಮಾಡಿಲ್ಲ. ಆದರೆ ಶಾಸಕ ಪರಣ್ಣ ಮುನವಳಿ ಬಗ್ಗೆ ಬೇಸರವಿದೆ. ನನ್ನ ವಾರ್ಡ್ನ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ವಹಿಸಿದ ನಿರ್ಲಕ್ಷ್ಯಕ್ಕೆ ನಾವು ದೂರ ಉಳಿದಿದ್ದು, ದೇವಸ್ಥಾನಕ್ಕೆ ಬಂದಿದ್ದೇವೆ. ನವೆಂಬರ್ 2ರಂದು ನೇರವಾಗಿ ಮತದಾನ ಮಾಡಲು ಬರುತ್ತೇವೆ. ಆ ಬಳಿಕ ಎಲ್ಲವನ್ನೂ ಹೇಳುತ್ತೇನೆ ಎಂದು ಸೋಮನಾಥ ವಿಡಿಯೋದಲ್ಲಿ ತಿಳಿಸಿದ್ದಾರೆ.