ಕೊಪ್ಪಳ: ನಗರದ ಸಾರ್ವಜನಿಕರ ಸಮಸ್ಯೆಗೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತುಗಳಿಗೆ ಪೂರ್ಣ ವಿರಾಮ ಹಾಕಲು ನಗರಸಭೆ ಮುಂದಾಗಿದೆ. ಪೊಲೀಸ್ ವ್ಯವಸ್ಥೆಯಲ್ಲಿದ್ದ ವಾಕಿಟಾಕಿ ವ್ಯವಸ್ಥೆ ಈಗ ಕೆಲ ವಲಯಕ್ಕೂ ಬಂದಿದ್ದು, ತ್ವರಿತ ಕೆಲಸಕ್ಕೆ ಅನುಕೂಲವಾಗುತ್ತಿದೆ. ಈ ವಾಕಿಟಾಕಿಗಳೀಗ ಕೊಪ್ಪಳ ನಗರಸಭೆ ಸಿಬ್ಬಂದಿ ಕೈ ಸೇರಿದೆ. ಈ ಮೂಲಕ ಹೊಸದೊಂದು ಪ್ರಯತ್ನಕ್ಕೆ ಕೊಪ್ಪಳ ನಗರಸಭೆ ಮುಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಕೊಪ್ಪಳ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದರ ಜತೆಗೆ ಸಮಸ್ಯೆಗಳು ಸಹ ಬೆಳೆಯುತ್ತಿವೆ. ನಗರದ ಸಾರ್ವಜನಿಕರ ಸಮಸ್ಯೆಗೆ ನಗರಸಭೆ ಅಧಿಕಾರಿಗಳು - ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಸಮಸ್ಯೆ ಸರಿಪಡಿಸಲು 15 ನೇ ಹಣಕಾಸು ಅನುದಾನದಲ್ಲಿ 12 ಲಕ್ಷ ರೂಪಾಯಿ ವೆಚ್ಚದಲ್ಲಿ ವಾಕಿಟಾಕಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನಗರದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗುವಂತೆ ವಾಕಿಟಾಕಿ ವ್ಯವಸ್ಥೆಯನ್ನು ನಗರಸಭೆ ಇತ್ತೀಚಿಗೆ ಅಳವಡಿಸಿಕೊಂಡಿದೆ.
ಕುಡಿಯುವ ನೀರು, ನೈರ್ಮಲ್ಯ, ತಾಜ್ಯ ವಿಲೇವಾರಿ ಸೇರಿದಂತೆ ನಗರಸಭೆ ವ್ಯಾಪ್ತಿಯ ವಾರ್ಡ್ಗಳ ವಿವಿಧ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದೊಂದಿಗೆ ನಗರಸಭೆ ಪೌರಾಯುಕ್ತರು ಸೇರಿದಂತೆ ಮೇಲುಸ್ತುವಾರಿಯ 40 ಸಿಬ್ಬಂದಿ ಕೈಗೆ ಈಗ ವಾಕಿ-ಟಾಕಿ ನೀಡಲಾಗಿದೆ.
ನಗರಸಭೆ ತನ್ನದೇ ಆದ ಪ್ರತ್ಯೇಕ ವಾಕಿ- ಟಾಕಿ ಕಂಟ್ರೋಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸಾರ್ವಜನಿಕರ ಯಾವುದೇ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರಾದರೂ ಅಂದುಕೊಂಡಷ್ಟು ತ್ವರಿತವಾಗಿ ಸ್ಪಂದಿಸಲು ಆಗುತ್ತಿಲ್ಲ. ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡುವುದು, ಅವರು ಅಲ್ಲಿಗೆ ಹೋಗಿ ಸ್ಪಂದಿಸಲು ವಿಳಂಬವಾಗುತ್ತಿತ್ತು. ಹೀಗಾಗಿ ಈಗ ವಾಕಿ- ಟಾಕಿ ವ್ಯವಸ್ಥೆಯಿಂದ ಸಮಸ್ಯೆಗೆ ಸ್ಪಂದಿಸಲು ಅತ್ಯಂತ ಅನುಕೂಲವಾಗುತ್ತಿದೆ.
ನಗರಸಭೆಯ ಪ್ರಮುಖ ಮೇಲುಸ್ತುವಾರಿ 40 ಸಿಬ್ಬಂದಿಯ ಕೈಗೆ ಈಗ ವಾಕಿ-ಟಾಕಿ ಬಂದಿರುವುದರಿಂದ ನಗರದ ಸಾರ್ವಜನಿಕರ ಯಾವುದೇ ಸಮಸ್ಯೆ ಕುರಿತಂತೆ ದೂರು ಬಂದರೂ ವಾಕಿ ಟಾಕಿಯಲ್ಲಿ ಹೇಳಲಾಗುತ್ತದೆ. ಆ ಸಮಸ್ಯೆ ಎಲ್ಲರ ಗಮನಕ್ಕೆ ಬರುತ್ತದೆ. ಆಗ ಸಂಬಂಧಿಸಿದವರು ಆದಷ್ಟು ಬೇಗ ಸ್ಥಳಕ್ಕೆ ತೆರಳುತ್ತಾರೆ ಅಥವಾ ಸಮಸ್ಯೆ ಪರಿಹರಿಸಲು ಸಿಬ್ಬಂದಿಗಳು ತಕ್ಷಣ ಸೂಚನೆ ನೀಡಿ ಸಮಸ್ಯೆ ಪರಿಹರಿಸುತ್ತಾರೆ. ವಾಕಿಟಾಕಿಯಿಂದ ಸಾರ್ವಜನಿಕರ ಕುಂದು ಕೊರತೆಗಳ ಪರಿಹಾರಕ್ಕೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗಿದೆ ಎನ್ನುತ್ತಾರೆ ನಗರಸಭೆ ಪ್ರಭಾರಿ ಪೌರಾಯುಕ್ತ ಮಂಜುನಾಥ ತಳವಾರ ಅವರು.
ಇದನ್ನೂ ಓದಿ: ಗುಬ್ಬಚ್ಚಿಗಳಿಗೆ ಆಶ್ರಯ ನೀಡಿ ಮಾದರಿಯಾದ ಮರಸಪ್ಪ ರವಿ
ಪ್ರಮುಖ ಮೇಲುಸ್ತುವಾರಿ ಸಿಬ್ಬಂದಿಗೆ ವಾಕಿ ಟಾಕಿ ನೀಡಿರುವುದರಿಂದ ಸಮಸ್ಯೆ ಎಲ್ಲರಿಗೂ ತಿಳಿಯುತ್ತದೆ. ಸಂಬಂಧಿಸಿದವರು ಸುಳ್ಳು ಹೇಳಲು ಬರುವುದಿಲ್ಲ, ಅಲ್ಲದೇ ಯಾವುದೇ ನೆಪ ಹೇಳದೇ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ನೆರವಾಗುತ್ತಿದೆ ಎನ್ನುತ್ತಾರೆ ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಅವರು.
ಒಟ್ಟಿನಲ್ಲಿ ನಗರಸಭೆ ಸಿಬ್ಬಂದಿ ಕೈಯಲ್ಲಿ ಬಂದಿರುವ ವಾಕಿಟಾಕಿಗಳು ಸಾರ್ವಜನಿಕರ ಸಮಸ್ಯೆಗೆ ಆ ಕೂಡಲೇ ಸ್ಪಂದಿಸಲು ನೆರವಾಗಬೇಕಿದೆ. ಅಗ ಮಾತ್ರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಿಕೊಂಡಿರುವ ಈ ವ್ಯವಸ್ಥೆಯ ಉದ್ದೇಶ ಸಾರ್ಥಕವಾಗುತ್ತದೆ.