ಕುಷ್ಟಗಿ : ತಾಲೂಕಿನ ನಂದಾಪುರ ಗ್ರಾಮದ ಗೆಳೆಯರಿಬ್ಬರು ಸಜ್ಜೆಯ ಹೊಲದಲ್ಲಿ ಬೈಕ್ ಬಳಸಿ ಕೇವಲ 2 ತಾಸಿನಲ್ಲಿ ಒಂದೂವರೆ ಲೀಟರ್ ಪೆಟ್ರೋಲ್‌ನಲ್ಲಿ 2 ಎಕರೆ ಯಡಿ ಕುಂಟೆ ಹೊಡೆದು ಗಮನ ಸೆಳೆದಿದ್ದಾರೆ.
ಗ್ರಾಮದ ಬಸಪ್ಪ ಎಂಬುವರು ಎರಡು ಎಕರೆಯಲ್ಲಿ ಸಜ್ಜೆ ಬೆಳೆದಿದ್ದಾರೆ. ಸಜ್ಜೆಯ ಬೆಳೆಯ ಸದ್ಯದ ಸ್ಥಿತಿಗೆ ಯಡಿ ಹೊಡೆಯಬೇಕೆನ್ನುವ ಕೊರಗನ್ನು ಬೈಕ್ ಮೂಲಕ ನೀಗಿಸಿದ್ದಾರೆ. ಮನೆಯಲ್ಲಿ ಎತ್ತುಗಳಿಲ್ಲ. ಎತ್ತುಗಳಿಂದ ಯಡಿ ಹೊಡೆಯಲು ಎಕರೆಗೆ ₹1200ರಿಂದ 1,500 ರೂಪಾಯಿಗೆ ಬಾಡಿಗೆ ವೆಚ್ಚವಾಗುತ್ತಿದೆ. 250 ರೂಪಾಯಿಂದ 300 ರೂ. ವೆಚ್ಚದಲ್ಲಿ ಬೈಕ್ ಮೂಲಕ ಮಾಡಿ ಯಡಿ ಹೊಡೆದು ಮುಗಿಸಿದ್ದಾರೆ.
ಸಕಾಲಿಕವಾಗಿ ಬೇಸಾಯ ಈಗಿನ ದುಬಾರಿ ವೆಚ್ಚದಲ್ಲಿ ಮಾಡಲು ಅಸಾಧ್ಯ ಎಂಬುದನ್ನು ಅರಿತ ಕನಕಪ್ಪ ಹಾಗೂ ಶಂಕ್ರಪ್ಪ ಎಂಬ ಗೆಳೆಯರಿಬ್ಬರು. ಬೈಕ್ಗೆ ಯಡಿ ಕುಂಟೆ ಕಟ್ಟಿ ಬೇಸಾಯ ಕಾರ್ಯ ಸಲೀಸಾಗಿ ನಿರ್ವಹಿಸಿದ್ದಾರೆ. ಕನಕಪ್ಪ ಬೈಕ್ ಸವಾರನಾದ್ರೆ, ಶಂಕ್ರಪ್ಪ ಕುಂಟೆ ಹಿಡಿದು ಸಾಥ್ ನೀಡಿದ್ದರು. ಭಾನುವಾರದ ಲಾಕ್ಡೌನ್ ಸಮಯವನ್ನು ಗೆಳೆಯರಿಬ್ಬರು ಈ ರೀತಿ ಬಳಸಿಕೊಂಡಿರುವುದು ಗಮನಾರ್ಹ.