ಕೊಪ್ಪಳ : ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಅ. 17ರಂದು ಸಂಜೆ ನಡೆದಿದ್ದ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಮಹಿಳೆಯ ಸಹೋದರನೇ ಬಾಡಿಗೆ ಹಂತಕರ ಮೂಲಕ ಹತ್ಯೆ ಮಾಡಿಸಿರೋದು ತನಿಖೆಯಲ್ಲಿ ಗೊತ್ತಾಗಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಆರೋಪಿಳಾದ ಮೃತ ತ್ರಿವೇಣಿ ಸಹೋದರ ಅವಿನಾಶ ಚಂದನಶಿವ ಹಾಗೂ ಯುವರಾಜ ನಿಂಬಾಳ್ಕರ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಸುಪಾರಿ ಹಂತಕರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.
ಅ. 17ರಂದು ಕಾರಟಗಿ ಪಟ್ಟಣದಲ್ಲಿ ನಡೆದ ಹತ್ಯೆ ಘಟನೆಯಲ್ಲಿ ತ್ರಿವೇಣಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತ್ರಿವೇಣಿ ಪತಿ ವಿನೋದ್ ಅವರನ್ನು ಈಗ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ.
ತ್ರಿವೇಣಿ ಹಾಗೂ ವಿನೋದ್ ಅವರು ಬ್ಯಾಂಕ್ ಉದ್ಯೋಗಿಗಳಾಗಿದ್ದು, ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರ ಅಂತರ್ಜಾತಿ ವಿವಾಹಕ್ಕೆ ತ್ರಿವೇಣಿ ಕುಟುಂಬದವರು ವಿರೋಧವಿತ್ತು. ತ್ರಿವೇಣಿ ಸಹೋದರ ಅವಿನಾಶ ಸೇಡು ಇಟ್ಟುಕೊಂಡು ತ್ರಿವೇಣಿ ಹಾಗೂ ಆಕೆಯ ಪತಿ ವಿನೋದ್ನ ಕೊಲೆಗೆ ಸಂಚು ಮಾಡಿ 50 ಸಾವಿರ ರೂ. ನೀಡಿದ್ದರು. ಬಾಡಿಗೆ ಹಂತಕರ ಮೂಲಕ ಕೊಲೆ ಮಾಡಿಸಿರೋದು ತನಿಖೆಯಲ್ಲಿ ತಿಳಿದು ಬಂದಿದೆ.
ಈಗ ಕೊಲೆಯಾದ ತ್ರಿವೇಣಿ ಸಹೋದರ ವಿನೋದ್ ಹಾಗೂ ಸಹಾಯ ಮಾಡಿದ ಯುವರಾಜ ನಿಂಬಾಳ್ಕರ್ನನ್ನು ಬಂಧಿಸಲಾಗಿದೆ. ಸುಪಾರಿ ಹಂತಕರು ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಬಾಡಿಗೆ ಹಂತಕರು ಇದೊಂದೆ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಅಥವಾ ಬೇರೆ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರಾ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಅಂತರ್ಜಾತಿ ವಿವಾಹವೇ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹೇಳಿದರು. ಡಿವೈಎಸ್ಪಿ ವೆಂಕಟಪ್ಪ ನಾಯಕ, ಆರ್.ಎಸ್. ಉಜ್ಜಿನಕೊಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.