ಕೊಪ್ಪಳ: ಮಂಗಳಮುಖಿ ನಾಯಕಿಯಾಗಿ ನಟಿಸಿರುವ 'ಮೂರನೇ ಕಣ್ಣು' ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಇಂದು ನಗರದಲ್ಲಿ ನಡೆಯಿತು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲೆಯ ಭಾಗ್ಯನಗರದ ಪ್ರತಿಭೆ ನಜೀರ್ ಕೆ.ಎನ್. ನಿರ್ದೇಶನದಲ್ಲಿ ಮೂಡಿ ಬಂದಿರುವ ಮೂರನೇ ಕಣ್ಣು ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳಿದ್ದು, ನಿರ್ದೇಶಕ ನಜೀರ್ ಕೆ.ಎನ್. ಅವರ ಸಾಹಿತ್ಯಕ್ಕೆ ರಾಧಾಕೃಷ್ಣ ಬಸ್ರೂರ್ ಅವರು ಸಂಗೀತ ಸಂಯೋಜಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರದ ನಾಯಕಿ ಮಂಗಳಮುಖಿ ಶ್ರೇಯಾ ಮಾತನಾಡಿ, ಮಂಗಳಮುಖಿಯರ ಜೀವನ ಕುರಿತ ಚಿತ್ರ ಇದಾಗಿದ್ದು, ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಮಂಗಳಮುಖಿವೋರ್ವರು ನಾಯಕಿಯಾಗಿ ನಟಿಸಿರುವ ದೇಶದ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ನಾನು ಮುಖ್ಯಪಾತ್ರದಲ್ಲಿ ನಟಿಸಿದ್ದು, ನನಗೆ ಬಹಳ ಖುಷಿ ತಂದಿದೆ. ಕಷ್ಟಪಟ್ಟು ಮಾಡಿರುವ ಈ ಸಿನಿಮಾವನ್ನು ಪ್ರೇಕ್ಷಕರು ನೋಡಿ ಹಾರೈಸುವ ಮೂಲಕ ಬೆನ್ನು ತಟ್ಟುವಂತೆ ಮನವಿ ಮಾಡಿದ್ರು.
ಈ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಕೆ.ಎನ್. ನಜೀರ್, ಸಂಗೀತ ನಿರ್ದೇಶಕ ರಾಧಾಕೃಷ್ಣ ಬಸ್ರೂರ್, ಸಾಹಿತಿ ಕಿನ್ನಾಳ ರಾಜ್, ನಿರ್ಮಾಪಕರಾದ ಅಬ್ದುಲ್ ಸಮದ್, ರಿಜ್ವಾನ್ ಬೇಪಾರಿ, ಚಿತ್ರದ ನಾಯಕ ನಟ ಸಚಿನ್, ರೋಶನಿ, ಕೆ.ಎಂ. ಸಯ್ಯದ್, ಕಾಟನ್ ಪಾಷಾ, ಮಾನ್ವಿ ಪಾಷಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.