ಗಂಗಾವತಿ: ಬೇಸಿಗೆ ಬಂತು ಎಂದರೆ ಕುಡಿಯುವ ನೀರಿಗೆ ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಸಮಸ್ಯೆ ಎದುರಾಗುತ್ತದೆ. ಆದರೆ ಗಂಗಾವತಿಯಲ್ಲಿ ಮಾತ್ರ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ಲೀಟರ್ ಶುದ್ಧ ಕುಡಿಯುವ ನೀರು ಪೋಲಾದ ಘಟನೆ ಬೆಳಕಿಗೆ ಬಂದಿದೆ.
ನಗರದ ರಾಣಾಪ್ರತಾಪ್ ಸಿಂಗ್ ವೃತ್ತಕ್ಕೆ ಸಮೀಪದ ಆಟೋನಗರದಲ್ಲಿ ಇರುವ 5 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಮೇಲ್ತೊಟ್ಟಿ (ಓವರ್ ಹೆಡ್ ಟ್ಯಾಂಕ್)ಯಿಂದ ಸುಮಾರು ನಾಲ್ಕು ಗಂಟೆಗೂ ಹೆಚ್ಚುಕಾಲ ನೀರು ಪೋಲಾಗಿರುವುದು ಬೆಳಕಿಗೆ ಬಂದಿದೆ. ನಗರದ ಜನರಿಗೆ ದಿನದ 24 ಗಂಟೆಯೂ ಕುಡಿಯುವ ನೀರು ತಲುಪಿಸುವ ಉದ್ದೇಶಕ್ಕೆ ಜಾರಿಗೆ ಬಂದಿರುವ 24*7 ಯೋಜನೆಯಲ್ಲಿನ ಈ ಟ್ಯಾಂಕಿನಿಂದ ಕಳೆದ ಹಲವು ದಿನಗಳಿಂದ ಎರಡು ದಿನಕ್ಕೊಮ್ಮೆಯಂತೆ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ.
ಸಮೀಪದಲ್ಲಿ ಜನವಸತಿ ಪ್ರದೇಶವಿಲ್ಲ. ಈ ಟ್ಯಾಂಕ್ ಮೂಲಕ ಇದುವರೆಗೆ ಯಾವುದೇ ವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿಲ್ಲ. ಆದರೆ, ಎರಡು ದಿನಕ್ಕೊಮ್ಮೆ ನಿತ್ಯ ನೀರು ಪೋಲಾಗುತ್ತಿದೆ. ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ಕೆ. ಖಾಸಿಂ ಬೇಸರ ವ್ಯಕ್ತಪಡಿಸಿದ್ದಾರೆ.