ಗಂಗಾವತಿ: ಕುರಿಗಾಹಿಯೊಬ್ಬರಿಗೆ ಸೇರಿದ ಕುರಿ ಹಿಂಡಿನ ಮೇಲೆ ತಡರಾತ್ರಿ ದಾಳಿ ಮಾಡಿದ ಚಿರತೆ ಹಿಂಡು ಐದು ಕುರಿಗಳನ್ನು ತಿಂದು ಹಾಕಿದ ಘಟನೆ ಸಿದ್ದೀಕೇರಿಯಲ್ಲಿ ನಡೆದಿದೆ.
ಯಮನೂರಪ್ಪ ಹನುಮಂತಪ್ಪ ಚಿಲಕಮುಕ್ಕಿ ಎಂಬುವರಿಗೆ ಸೇರಿದ್ದ ಕುರಿ ಹಿಂಡಿನ ಮೇಲೆ ರಾತ್ರಿ ಎರಡು ಗಂಟೆ ಸುಮಾರಿಗೆ ಒಂದು ದೊಡ್ಡ ಚಿರತೆ ಹಾಗೂ ಎರಡು ಮರಿಗಳು ದಾಳಿ ಮಾಡಿವೆ. ಈ ವೇಳೆ ಚಿರತೆ ಹಿಂಡು ಐದು ಕುರಿಗಳನ್ನು ತಿಂದು ಹಾಕಿದೆ.
ಚಿರತೆಗಳು ಕುರಿ ಹಿಂಡಿನ ಮೇಲೆ ಮನಸೋಇಚ್ಛೆ ದಾಳಿ ಮಾಡಿವೆ. ಈ ವೇಳೆ ಸುಮಾರು 17ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಐದು ಕುರಿಗಳು ಗಂಭೀರ ಗಾಯಕ್ಕೀಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ವೇಳೆ ಚಿರತೆ ಹಿಂಡು ಕಾಣಿಸಿಕೊಂಡ ಪರಿಣಾಮ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಚಿರತೆಯನ್ನು ಸೆರೆ ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ.