ಕೊಪ್ಪಳ: ಧಾರಾವಾಡ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮುಂಬೈ ಮಹಿಳೆ ಕೊಪ್ಪಳಕ್ಕೆ ಬಂದ ಪ್ರಕರಣ ಸಂಬಂಧ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಪ್ರತಿಕ್ರಿಯಿಸಿದ್ದಾರೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬಾಂಬೆ ಮೂಲದ ಮಹಿಳೆಯನ್ನು ಕೊಪ್ಪಳಕ್ಕೆ ಕರೆತಂದ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಘವೇಂದ್ರ ಹಿಟ್ನಾಳ್ ಆಗ್ರಹಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಸಂದರ್ಭದಲ್ಲಿ ಬೇರೆ ರಾಜ್ಯದಿಂದ ಇಲ್ಲಿಗೆ ಜನರು ಬರುತ್ತಾರೆಂದರೆ ಇದಕ್ಕೆ ಪೊಲೀಸ್ ಅಧಿಕಾರಿಗಳ ಬೆಂಬಲ ಇರಬೇಕು. ಈ ಸಂಬಂಧ ನಾನು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಈ ಪ್ರಕರಣವನ್ನು ನಮ್ಮ ಪಕ್ಷದ ನಾಯಕರ ಗಮನಕ್ಕೆ ಕೂಡಾ ತರುತ್ತೇನೆ. ಸುಮ್ಮನೆ ಬಿಡಲು ಇದು ಸಣ್ಣ ವಿಷಯವಲ್ಲ. ಈ ಕುರಿತಂತೆ ನ್ಯಾಯಾಂಗ ತನಿಖೆಯಾಗಲಿ. ಯಾರು ತಪ್ಪಿತಸ್ಥರು ಎಂಬ ವಿಷಯ ಎಲ್ಲರಿಗೂ ತಿಳಿಯಲಿ. ಇಂತವರಿಗೆ ಯಾವುದೇ ಪಕ್ಷದ ಮುಖಂಡರೂ ಬೆಂಬಲ ನೀಡುವುದಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ಲಾಳ್ ಹೇಳಿದರು.
ಮಾರ್ಚ್ 19 ರಂದು ಧಾರವಾಡದ ಕೊರೊನಾ ಸೋಂಕಿತ ವ್ಯಕ್ತಿ ಪ್ರಯಾಣಿಸಿದ್ದ ಬಸ್ನಲ್ಲೇ ಬಾಂಬೆ ಮೂಲದ ಮಹಿಳೆ ಕೂಡಾ ಪ್ರಯಾಣಿಸಿದ್ದರು. ವಿಷಯ ತಿಳಿದ ಜಿಲ್ಲಾಡಳಿತ ಮಹಿಳೆಯನ್ನು ಹುಬ್ಬಳ್ಳಿಯಲ್ಲಿ ಕ್ವಾರಂಟೈನ್ನಲ್ಲಿ ಇಡಲು ಸೂಚಿಸಿತ್ತು. ಆದರೆ ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ಮಹಿಳೆ ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬಂದು ಅಲ್ಲಿ ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಮುಂಬೈಗೆ ವಾಪಸ್ ಹೋಗಲು ಪಾಸ್ ಕೊಡಿಸುತ್ತೇನೆ ಎಂದು ಆಕೆಯನ್ನು ಕೊಪ್ಪಳಕ್ಕೆ ಕರೆತಂದ ಗುರುಬಸವರಾಜ ಹೊಳಗುಂದಿ ಹಾಗೂ ಕ್ವಾರಂಟೈನ್ ಅವಧಿ ಮುಗಿಯುವ ಮುನ್ನವೇ ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಪ್ರಯಾಣಿಸಿದ ಬಾಂಬೆ ಮೂಲದ ಮಹಿಳೆ ಇಬ್ಬರ ಮೇಲೂ ಪ್ರಕರಣ ದಾಖಲಿಸಿದ್ದು ಈ ಬಗ್ಗೆ ತನಿಖೆ ನಡೆಸಲು ಶಾಸಕ ರಾಘವೇಂದ್ರ ಹಿಟ್ನಾಳ್ ಆಗ್ರಹಿಸಿದ್ದಾರೆ.