ಕನಕಗಿರಿ( ಕೊಪ್ಪಳ): ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರು ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ.
ಕನಕಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಬ್ಬೊಬ್ಬರ ಕಾಲ್ಗುಣ, ಅವರವರ ಯೋಗಾಯೋಗ, ಅದೃಷ್ಟದಂತೆ ರಾಜಕಾರಣ ಮಾಡುತ್ತಾರೆ. ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಎಲ್ಲರನ್ನೂ ಸಮಾನವಾಗಿ ಪ್ರೀತಿಯಿಂದ ಕಾಣುವ ಮೂಲಕ ಸಂಘಟನೆ ಮಾಡುತ್ತಾರೆ. ಅವರ ರಾಜಕಾರಣದ ನೀತಿಯಿಂದ ಈಗಾಗಲೇ ನಡೆದಿರುವ ಉಪಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಮಸ್ಕಿಯಲ್ಲೂ ಸಹ ಈಗ ಅವರಿಗೆ ಉಸ್ತುವಾರಿ ನೀಡಲಾಗಿದೆ. ಅಲ್ಲಿಯೂ ಸಹ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆ ಎಂದು ಹೇಳಿದರು.
ಇನ್ನು ಎಲ್ಲ ಪಕ್ಷದವರದ್ದೂ ಸಿಡಿ ಇವೆ. ಅವರದ್ದು ಸಿಡಿ ಇರಬಹುದು, ಇವರದ್ದು ಸಿಡಿ ಇರಬಹುದು, ಇನ್ನೊಬ್ಬರದ್ದೂ ಸಿಡಿ ಇರಬಹುದು. ಯಾರಿಲ್ಲ ಅಂತ ಹೇಳಿ ನೋಡೋಣ. ಆದರೆ, ಅವರ ಹೆಸರು ಹೇಳುವುದು ಬೇಡ ಎಂದರು.
ಯಾವ ಸಿಡಿ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿನಿಮಾ ಸಿಡಿ, ಈ ಸಿಡಿ ಅಲ್ಲ, ಸಿನಿಮಾ ತೋರುಸ್ತಾರಲ್ಲ ಆ ಸಿಡಿ ಎಂದು ಶಾಸಕ ಬಸವರಾಜ ದಡೇಸೂಗೂರು ತಮ್ಮ ಮಾತಿನ ವರಸೆಯನ್ನು ಬದಲಾಯಿಸಿದರು.