ಕೊಪ್ಪಳ: ಹಾಲಪ್ಪ ಆಚಾರ್ ಹಿರಿಯರು. ಅವರಿಗೆ ಸಮುದಾಯದ ಆಧಾರದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕನಕಗಿರಿಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಎಲ್ಲಾ ನಾಯಕರು ನನಗೆ ನಿಗಮ ಮಂಡಳಿ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಠರ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುತ್ತದೆ. ಹಾಲಪ್ಪ ಆಚಾರ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ನನಗೆ ಬೇಸರವಿಲ್ಲ. ಅವರು ನಮ್ಮ ಹಿರಿಯರು. ಸಮುದಾಯದ ಆಧಾರದ ಮೇಲೆ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಅವರಿಗೆ ಎರಡು ಖಾತೆಗಳನ್ನು ನೀಡಿರುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದರು.
ನಾನು ಸಹ ಸಚಿವ ಸ್ಥಾನ ಕೇಳಿದ್ದೆ. ಕಾರ್ಯಕರ್ತರು ಸಹ ಮನವಿ ಮಾಡಿದ್ದರು. ಆದರೆ ನಮ್ಮ ಜಿಲ್ಲೆಯಲ್ಲಿ ಹಾಲಪ್ಪ ಆಚಾರ್ ಅವರಿಗೆ ಸಿಕ್ಕಿರುವುದು ನಮಗೆ ಖುಷಿಯಾಗಿದೆ. ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಖಾತೆ ಹಂಚಿಕೆಯಲ್ಲಿ ಸಚಿವ ಆನಂದ್ ಸಿಂಗ್ ಅವರ ಬೇಸರ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ದಡೇಸೂಗುರು, ನಾವೆಲ್ಲ ಆ ಕುರಿತಂತೆ ಏನೂ ಮಾತನಾಡುವುದಿಲ್ಲ. ಒಂದು ವೇಳೆ ಮಾತನಾಡಿದರೆ ಸಮಸ್ಯೆ ಆಗಬಹುದು ಎಂದು ಹೇಳಿದರು.