ಕೊಪ್ಪಳ:ಸಮುದಾಯಕ್ಕೊಂದು ಪ್ರಾಧಿಕಾರ ಮಾಡುವುದು ಸರಿಯಾದ ಕ್ರಮವಲ್ಲ. ಯಾವ ಸಮುದಾಯದಲ್ಲಿ ಜನರು ಹಿಂದುಳಿದಿರುತ್ತಾರೋ ಅಂತಹ ಸಮುದಾಯಕ್ಕೆ ಪ್ರಾಧಿಕಾರ ಮಾಡಬೇಕು ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅಭಿಪ್ರಾಯಪಟ್ಟಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಈಗಾಗಲೇ ರಚನೆಯಾಗಿರುವ ಪ್ರಾಧಿಕಾರಗಳು ಪರಿಪೂರ್ಣವಾಗಿ ಕೆಲಸ ಮಾಡುತ್ತಿಲ್ಲ. ಹಣಕಾಸಿನ ತೊಂದರೆಯಿಂದ ಜನರ ನಿರೀಕ್ಷೆಗೆ ತಕ್ಕಂತೆ ಅವುಗಳಿಂದ ಕೆಲಸವಾಗಿಲ್ಲ. ಈಗ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ, ಮರಾಠ ಜನರ ಅಭಿವೃದ್ಧಿಗೆ ಈ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಹೇಳುತ್ತಿದೆ. ಆದರೆ ಪ್ರಾಧಿಕಾರದ ರಚನೆಗೆ ಇದು ಸಂದರ್ಭವಲ್ಲ. ಮತದಾರರನ್ನು ಓಲೈಕೆ ಮಾಡಲು ಈ ಪ್ರಾಧಿಕಾರ ರಚನೆ ಮಾಡಿದ್ದಾರೆ ಎಂದು ಜನಸಾಮಾನ್ಯರೇ ಮಾತನಾಡಿಕೊಳ್ಳುತ್ತಿದ್ದಾರೆ. ಜನರಿಗೆ ಸ್ಪಂದಿಸುವ ಕೆಲಸವಾಗಬೇಕಿದೆ. ತಳಸಮುದಾಯಗಳ ಜನರಿಗೆ ಪ್ರಾಧಿಕಾರ ಮಾಡುವುದು ಸೂಕ್ತ. ಜೊತೆಗೆ ಪರಿಪೂರ್ಣ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದರು.
ಇನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಅದೇ ಜಿಲ್ಲೆಯವರನ್ನು ನೇಮಕ ಮಾಡಲು ಈ ಸರ್ಕಾರಕ್ಕೆ ತಾಂತ್ರಿಕ ತೊಂದರೆ ಇದೆ. ಏಕೆಂದರೆ ಬೇರೆ ಪಕ್ಷದಿಂದ ಬಂದವರಿಂದ ಬಿಜೆಪಿ ಸರ್ಕಾರ ಬಂದಿದೆ. ಅವರನ್ನು ಪ್ಲೀಸ್ ಮಾಡಬೇಕು. ಅದೇ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡುವುದು ಒಳ್ಳೆಯದು. ನಮ್ಮ ಜಿಲ್ಲೆಯಲ್ಲಿರುವ ಮೂವರು ಬಿಜೆಪಿ ಶಾಸಕರಲ್ಲಿ ಯಾರನ್ನಾದರೂ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವುದು ಸೂಕ್ತ ಎಂದು 'ಕೈ' ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.