ಗಂಗಾವತಿ (ಕೊಪ್ಪಳ): ಸಚಿವ ಶಿವರಾಜ ತಂಗಡಗಿ ತಮ್ಮ ಬಾಲ್ಯದಲ್ಲಿ ಹೇಗೆ ಉತ್ತಮ ಕ್ರೀಡಾಪಟುವಾಗಿದ್ದರೋ ಹಾಗೆ ರಾಜಕೀಯದಲ್ಲೂ ಚತುರ ರಾಜಕಾರಣಿಯಾಗಿ ಸ್ವತಂತ್ರವಾಗಿ ಗೆದ್ದು ಬಂದು ಕರ್ನಾಟಕದಲ್ಲಿ ಮೊದಲ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದರು ಎಂದು ಗಂಗಾವತಿ ಶಾಸಕ ಜಿ. ಜನಾರ್ದನರಡ್ಡಿ ಹೇಳಿದರು. ನಗರದ ಚನ್ನಬಸವಸ್ವಾಮಿ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಂಗಾವತಿ ಕನಕಗಿರಿ ಮತ್ತು ಕಾರಟಗಿ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ತಂಗಡಗಿ ಅವರ ಪಾತ್ರವೂ ಪ್ರಧಾನವಾಗಿತ್ತು. ಬಾಲ್ಯದಲ್ಲಿ ತಂಗಡಗಿ ಕ್ರೀಡೆಯಲ್ಲಿ ಹೇಗೆ ಉತ್ತಮ ಸಾಧನೆ ಮಾಡಿದ್ದಾರೋ ಹಾಗೆ ಕನಕಗಿರಿಯಿಂದ ಸ್ವತಂತ್ರವಾಗಿ ಗೆದ್ದು ರಾಜಕೀಯದಲ್ಲಿ ತಮ್ಮ ಸಾಧನೆ ತೋರಿದ್ದರು. ಹೀಗಾಗಿ ಅವರು ಬಿಜೆಪಿ ಸೇರಿ ಸರ್ಕಾರ ರಚಿಸಿದರು. ಆಗ ನಾನು ಒಬ್ಬ ಸಹೋದರನಾಗಿ ತಂಗಡಗಿ ಅವರಿಗೆ ಸಹಕಾರ ಮಾಡಿದ್ದೆ. ಹೀಗಾಗಿ ನನ್ನ ಬಗ್ಗೆ ತಂಗಡಗಿ ಅವರಿಗೆ ವಿಶೇಷ ಪ್ರೀತಿ ಇದೆ. ಗಂಗಾವತಿಯ ಬಗ್ಗೆ ಬಹಳಷ್ಟು ಕಾಳಜಿ ಇದೆ ಎಂದರು.
ಗಂಗಾವತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸ್ಟೇಡಿಯಂ ನಿರ್ಮಾಣಕ್ಕೆ ನಾನು ಯೋಜನೆ ರೂಪಿಸಿಕೊಂಡಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಿವರಾಜ ತಂಗಡಗಿ ಸಂಪೂರ್ಣ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ. ಗಂಗಾವತಿ-ಕನಕಗಿರಿ ಮತ್ತು ಶಿವರಾಜ ತಂಗಡಗಿ, ಜನಾರ್ದನರೆಡ್ಡಿ ಎಲ್ಲವನ್ನೂ ಒಟ್ಟಾಗಿ ನೋಡಿದರೆ ಗಂಗಾವತಿಯಲ್ಲಿ ಒಂದು ಸುಂದರವಾದ ಸ್ಟೇಡಿಯಂ ಆಗಿ ಪರಿವರ್ತನೆಯಾಗಬೇಕು ಎಂಬ ನನ್ನ ಆಸೆಗೆ ತಂಗಡಗಿ ಬೆಂಬಲವಾಗಿ ನಿಲ್ಲುತ್ತಾರೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮನ್ನು ತಾವು ದೇವರಾಜ ಅರಸು ಎಂದು ಎಲ್ಲಿಯೂ ಸಿಎಂ ಬಿಂಬಿಸಿಕೊಂಡಿಲ್ಲ: ತಮ್ಮನ್ನು ತಾವು ದೇವರಾಜ ಅರಸು ಎಂದು ಎಲ್ಲಿಯೂ ಸಿದ್ದರಾಮಯ್ಯ ಬಿಂಬಿಸಿಕೊಂಡಿಲ್ಲ. ವಿರೋಧಿಗಳ ಟೀಕೆಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಸಿದ್ದರಾಮಯ್ಯ ಎಂದಿಗೂ ತಮ್ಮನ್ನು ದೇವರಾಜ ಅರಸು ಎಂದು ಬಿಂಬಿಸಿಕೊಂಡವರಲ್ಲ. ಜನ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ರೀತಿಯಲ್ಲಿ ನೋಡುತ್ತಿದ್ದಾರೆ. ನಾನೂ ಕೂಡ ಸಿದ್ದರಾಮಯ್ಯ ಎರಡನೇ ದೇವರಾಜ ಅರಸು ಎಂದು ಸಾಕಷ್ಟು ವೇದಿಕೆಗಳಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದರು.
ಬಿಜೆಪಿ ಅವಧಿಯಲ್ಲಿ ಅಕ್ರಮ: ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಮರಳಿನ ವಿಚಾರದಲ್ಲಿ ಕನಕಗಿರಿ-ಗಂಗಾವತಿ ಸೇರಿದಂತೆ ನಾನಾ ಕಡೆಗಳಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ತಂಗಡಗಿ, ಕಾನೂನು ಬದ್ಧವಾಗಿ ಯಾರಿಗೆ ಲೈಸೆನ್ಸ್ ಇದೆಯೋ ಅವರು ಮಾತ್ರ ಮರಳು ಸಾಗಿಸಬೇಕು ಎಂಬ ಕಾರಣಕ್ಕೆ ಇದುವರೆಗೂ ತಡೆ ನೀಡಲಾಗಿತ್ತು. ಶೀಘ್ರವೇ ಗಣಿ ಅಧಿಕಾರಿಗಳು, ಡಿಸಿ, ಎಸ್ಪಿ ಜೊತೆ ಸಭೆ ನಡೆಸಿ ಸಕ್ರಮ ಮರಳು ಸಾಗಾಣಿಕೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ: ಸಿಎಂ ಸಿದ್ದರಾಮಯ್ಯ