ಕುಷ್ಟಗಿ (ಕೊಪ್ಪಳ): ಕೊರೊನಾ ಕ್ಲಿಷ್ಟಕರ ಸನ್ನಿವೇಶದಲ್ಲೂ ಕೊರೊನಾ ವೈರಸ್ ನಿಯಂತ್ರಿಸಲು ಆರೋಗ್ಯ ಸಚಿವ ಕೆ.ಸುಧಾಕರ್ ಅವರ ಕಾರ್ಯವೈಖರಿಗೆ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಭೇಷ್ ಎಂದಿದ್ದಾರೆ.
ಕುಷ್ಟಗಿಯ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ನಿರ್ವಹಣೆ ಹಾಗೂ ಕೋವಿಡ್ ನಿಯಂತ್ರಣ ಕುರಿತು ತುರ್ತು ಸಭೆ ಬಳಿಕ ಮಾತನಾಡಿದ ಅವರು, ಕೊರೊನಾ ವ್ಯಾಪಕವಾಗಿ ಹರಡುತ್ತಿದ್ರೂ ಸರ್ಕಾರ ಕೋವಿಡ್ ನಿಯಂತ್ರಣದ ಮಾರ್ಗಸೂಚಿಗಳನ್ನು ಜನರು ಪಾಲಿಸದೇ ಇರುವುದು ನೋವಿದೆ ಎಂದರು.
ಇಂತಹ ಪರಿಸ್ಥಿತಿಯಲ್ಲಿ ಜನ ವಿನಾ ಕಾರಣ ಸಂಚರಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ಸ್ವಯಂ ಲಾಕ್ಡೌನ್ ಮಾಡಿಕೊಳ್ಳುವ ಸಲಹೆ ನೀಡಿದ್ದಾರೆ. ನಾಗರಿಕ ಪ್ರಜ್ಞೆಯಿಂದ ಎಲ್ಲರೂ ಮನೆಯಲ್ಲಿ ಇರಬೇಕಿದೆ. ಕೊರೊನಾ ನಿಯಂತ್ರಿಸಲು ಕಂದಾಯ ಸಚಿವರು, ಉನ್ನತ ಶಿಕ್ಷಣ ಸಚಿವರು, ಗೃಹ ಸಚಿವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅದರಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಸಂಪೂರ್ಣ ತೊಡಗಿಸಿಕೊಂಡಿದ್ದು, ಜನ ಸಂಪರ್ಕದಲ್ಲಿದ್ದಾರೆ ಎಂದು ಅವರ ಕಾರ್ಯದ ಬಗ್ಗೆ ಶ್ಲಾಘಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಯಸ್ಸಾದರೂ ಎಲ್ಲಾ ಭಾಗಕ್ಕೂ ಭೇಟಿ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಸರ್ಕಾರ ಇಷ್ಟೊಂದು ರೀತಿಯಲ್ಲಿ ಕಷ್ಟ ಪಡುತ್ತಿದ್ದರೂ ಅರ್ಥ ಮಾಡಿಕೊಂಡು ಜನ ಸಹಕರಿಸಬೇಕಿತ್ತು. ಜನ ಸಹಕರಿಸದೇ ಇರುವುದು ಕೋವಿಡ್ ಉಲ್ಬಣಕ್ಕೆ ಕಾರಣವಾಗಿದೆ ಎಂದರು.