ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರದಿಂದ ಕನಕಗಿರಿಯವರೆಗೆ ಸುಮಾರು 10 ಕಿಲೋ ಮೀಟರ್ ಸದ್ಭಾವನಾ ಪಾದಯಾತ್ರೆಯನ್ನು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಇಂದು ನಡೆಸಿದರು.
ಮಾಜಿ ಸಚಿವ ಶಿವರಾಜ ತಂಗಡಗಿ, ಮಹಾತ್ಮ ಗಾಂಧೀಜಿಯವರ 150 ಜನ್ಮ ದಿನಾಚರಣೆ, ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರವಾಗದ ಸರ್ಕಾರದ ಧೋರಣೆ ಅಂಶಗಳನ್ನಿಟ್ಟುಕೊಂಡು ಮುಸಲಾಪುರದಿಂದ ಕನಕಗಿರಿಯವರಗೆ ಪಾದಯಾತ್ರೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ನಡೆಯುವ ಉಪ ಚುನಾವಣೆ ಬಳಿಕ ಬಿ.ಎಸ್.ಯಡಿಯೂರಪ್ಪ5ರ ಸರ್ಕಾರವಿರೋದಿಲ್ಲ ಎಂದು ಭವಿಷ್ಯ ನುಡಿದರು. ಇನ್ನು ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ನಿಜವಾದ ತಾಕತ್ತಿರುವ ವ್ಯಕ್ತಿ. ನಾನು ಕಾಂಗ್ರೆಸ್ಸಿಗನಾದರೂ ಅವರನ್ನು ಅಭಿನಂದಿಸುತ್ತೇನೆ ಎಂದರು.
ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರಿಗೆ ನೋಟಿಸ್ ನೀಡದರೂ ಯತ್ನಾಳ್ ಜಗ್ಗಲಿಲ್ಲ. ನಾವು ಉತ್ತರ ಕರ್ನಾಟಕದ ಗಂಡು ಮೆಟ್ಟಿನ ನಾಡಿನವರು. ನೋಟಿಸ್ ನೀಡಿದರೂ ಕೇರ್ ಮಾಡೋದಿಲ್ಲ ಎಂದು ಯತ್ನಾಳ್ ಪರ ತಂಗಡಗಿ ಬ್ಯಾಟ್ ಬೀಸಿದರು. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಅಟೋ ಮೊಬೈಲ್, ಜವಳಿ ಉದ್ಯಮ ನೆಲಕಚ್ಚಿವೆ. ಇದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಶಿವರಾಜ ತಂಗಡಗಿ ಆರೋಪಿಸಿದರು.
ಇನ್ನು ನಾವು ಎಷ್ಟೋ ಬಾರಿ ನೀರಿಗೆ ಗೋಗರೆದಾಗ ಮಹಾರಾಷ್ಟ್ರ ನೀರು ಬಿಟ್ಟಿಲ್ಲ. ಕೆಲವೊಮ್ಮೆ ನೀರು ಬಿಟ್ಟರೂ ಹಣ ಪಡೆದುಕೊಂಡು ನೀರು ಬಿಟ್ಟಿದೆ. ಈಗ ಯಡಿಯೂರಪ್ಪ ಅವರು ಮಹಾರಾಷ್ಟ್ರಕ್ಕೆ ನೀರು ಬಿಡ್ತೀನಿ ಅಂತ ಅಲ್ಲಿನ ಜನರಿಗೂ ಸುಳ್ಳು ಹೇಳಿದ್ದಾರೆ. ಬಿಜೆಪಿಯವರೆಲ್ಲರೂ ಸುಳ್ಳು ಹೇಳುವವರು. ಸುಳ್ಳೇ ಅವರ ಮನೆ ದೇವರು ಎಂದು ಶಿವರಾಜ ತಂಗಡಗಿ ಟೀಕಿಸಿದರು.