ಕೊಪ್ಪಳ : ಬಿಜೆಪಿಯಲ್ಲಿ ವಿರೋಧ ಪಕ್ಷ ಸ್ಥಾನಕ್ಕೆ ಇನ್ನೂ ಟೆಂಡರ್ ಆಗಿಲ್ಲ. ಈಗ ಟೆಂಡರ್ ಕರೆದಿದ್ದಾರೆ. ಟೆಂಡರ್ನಲ್ಲಿ ಜೆಡಿಎಸ್ನವರು ಭಾಗವಹಿಸಬಹುದು. ಈ ಟೆಂಡರ್ ಜೆಡಿಎಸ್ನವರಿಗೆ ಸೇಲ್ ಆಗಬಹುದು. ಬಿಜೆಪಿಯೊಳಗೆ ಸಿಎಂ ಕುರ್ಚಿ ಸೇರಿದಂತೆ ಎಲ್ಲಾ ಸ್ಥಾನಗಳು ಸೇಲ್ ಆಗಿವೆ ಎಂದು ಬಿಜೆಪಿ ವಿರುದ್ಧ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಎಂಪಿ ಟಿಕೆಟ್ ಕೂಡ ವಿಧಾನಸಭೆ ಟಿಕೆಟ್ ರೀತಿ ಮಾರಾಟವಾಗಬಹುದು. ಹಿಂದಿನ ವಿಧಾನಸಭೆಯ ಟಿಕೆಟ್ಗಳು ಕೂಡ ಬಿಜೆಪಿಯಲ್ಲಿ ಮಾರಾಟವಾಗಿವೆ. ಶಾಸಕ ಸ್ಥಾನದ ಟಿಕೆಟ್ 5 ಕೋಟಿ, ಎಂಪಿ ಟಿಕೆಟ್ 10 ಕೋಟಿ, ಸಚಿವರಾಗಲು 80 ಕೋಟಿ ಡೀಲ್, ಮುಖ್ಯಮಂತ್ರಿ ಕುರ್ಚಿ 2500 ಕೋಟಿಗೆ ಸೇಲ್ ಆಗಿರಬಹುದು ಎಂದು ಬಿಜೆಪಿ ವಿರುದ್ಧ ಸಚಿವ ತಂಗಡಗಿ ಹೇಳಿದ್ದಾರೆ.
ಕನಕಗಿರಿಯಲ್ಲಿಯೂ ಹಣ ನೀಡಿದ್ದರೆ ಸಿಸಿಬಿ ತನಿಖೆಯಾಗಲಿ : ಚೈತ್ರಾ ಕುಂದಾಪುರ ಹಾಗೂ ಚಕ್ರವರ್ತಿ ಸೂಲಿಬೆಲೆ ಅಣ್ಣ ತಂಗಿ. ಇವರು ಕೇವಲ ಭಾಷಣ ಮಾಡೋದಷ್ಟೆ ಅಲ್ಲ. ಜೊತೆಗೆ ಬಿಜೆಪಿ ಟಿಕೆಟ್ ಕೊಡಿಸುವ ಟೆಂಡರ್ ಕೂಡ ತೆಗೆದುಕೊಂಡಿದ್ದಾರೆ. ಕನಕಗಿರಿಯಲ್ಲೂ ಟಿಕೆಟ್ಗಾಗಿ ಹಣ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆಯೂ ಸಿಸಿಬಿ ತನಿಖೆಯಾಗಬೇಕು ಎಂದು ತಂಗಡಿಗಿ ಒತ್ತಾಯಿಸಿದರು.
ಬರ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ : ರಾಜ್ಯ ಸರ್ಕಾರ 162 ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಿದೆ. ಬರ ನಿರ್ವಹಣೆ ಅಗತ್ಯ ಕ್ರಮ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬರದ ನಿಯಮಾವಳಿ ಸಡಿಲೀಕರಣ ಬಗ್ಗೆ ಕೇಂದ್ರಕ್ಕೆ ಸಿಎಂ ಪತ್ರ ಬರೆದಿದ್ದಾರೆ. ಬರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಜ್ಯದ 25 ಜನ ಸಂಸದರು ಬರದ ವಿಷಯದಲ್ಲಿ ಕಣ್ಣು ತೆರೆದು ನೋಡಬೇಕು. 25 ಜನ ಸಂಸದರು ಕೇಂದ್ರಕ್ಕೆ ಒತ್ತಾಯ ಮಾಡಬೇಕು. ಕೇಂದ್ರ ಸರ್ಕಾರ ಎನ್ಡಿಆರ್ಎಫ್ ನಿಯಮ ಬದಲಾಯಿಸಬೇಕು. ಆರು ವಾರದವರೆಗೂ ಮಳೆಯಾಗದೆ ಇದ್ದರೆ ಬರ ಎಂದು ಘೋಷಣೆ ಮಾಡಲಾಗುವುದು. ಬರದ ವಿಶೇಷ ಪ್ಯಾಕೇಜ್ ಕುರಿತು ಸಿಎಂ ನಿರ್ಧರಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಡಿಸಿಎಂ ಹುದ್ದೆಯ ಬಗ್ಗೆ ಸಚಿವ ಕೆ ಎನ್ ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತ್ರಿಕ್ರಿಯಿಸಿ, ರಾಜಣ್ಣ ಹೇಳಿಕೆಯ ಬಗ್ಗೆ ನಾನು ಏನೂ ಪ್ರತಿಕ್ರಿಯಿಸುವುದಿಲ್ಲ. ಈ ಬಗ್ಗೆ ಕೇಂದ್ರದ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು. ಜೆಡಿಎಸ್ ಜೊತೆಯಲ್ಲಿ ಬಿಜೆಪಿ ಹೊಂದಾಣಿಕೆ ಬಗ್ಗೆ ಪ್ರತ್ರಿಕ್ರಿಯಿಸಿ, ಹೊಂದಾಣಿಕೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಲಾಭ ಆಗುತ್ತದೆ. ಜೆಡಿಎಸ್, ಬಿಜೆಪಿಯ ಹೊಂದಾಣಿಕೆಯಿಂದ ನಮಗೆ ನಷ್ಟವಿಲ್ಲ ಎಂದು ಹೇಳಿದರು. ಡಿಸೆಂಬರ್ ಒಳಗೆ ಮಳೆಯಾಗುವ ನಿರೀಕ್ಷೆ ಇದೆ. ಡಿಸೆಂಬರ್ ನಂತರ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ : ಮೂವರು ಡಿಸಿಎಂ ನೇಮಕಕ್ಕೆ ಹೈಕಮಾಂಡ್ಗೆ ಪತ್ರ ಬರೆಯುತ್ತೇನೆ : ಸಚಿವ ಕೆ ಎನ್ ರಾಜಣ್ಣ