ಕೊಪ್ಪಳ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ. ಈಗಾಗಲೇ ಸವದತ್ತಿ ಯಲ್ಲಮ್ಮ ಪ್ರಾಧಿಕಾರವನ್ನು ಘೋಷಣೆ ಮಾಡಿದ್ದೇವೆ. ಚಾಮುಂಡಿ ಬೆಟ್ಟ ಪ್ರಾಧಿಕಾರ ಮಾಡುತ್ತಿದ್ದೇವೆ ಎಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಹುಲಿಗೆಮ್ಮ ದೇವಿ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಅಂಜನಾದ್ರಿ, ಹುಲಿಗೆಮ್ಮ ದೇವಸ್ಥಾನಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಪ್ರಾಧಿಕಾರ ರಚನೆ ಬಗ್ಗೆ ಚಿಂತನೆ ನಡೆಸಲಾಗುವುದು. ರಾಜ್ಯದ ಪ್ರಮುಖ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲಾಗುವುದು. ಎಲ್ಲೆಲ್ಲಿ ಕೋಟ್ಯಂತರ, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಅಲ್ಲೆಲ್ಲ ಮೂಲ ಸೌಕರ್ಯ ಕಲ್ಪಿಸಲಾಗುವುದು. ಅಂಜನಾದ್ರಿ, ನಂಜನಗೂಡಿನ ನಂಜುಂಡೇಶ್ವರ, ಹುಲಿಗೆಮ್ಮ, ಮೈಲಾರ ಲಿಂಗೇಶ್ವರ ಸೇರಿ ಇತರ ಪ್ರಮುಖ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ಹುಲಿಗೆಮ್ಮ ದೇವಾಲಯದಲ್ಲಿ ಅನುದಾನ ಇದೆ. 30 ಎಕರೆ ಜಾಗ ಖರೀದಿಸಲಾಗಿದೆ. ಕೂಡಲೇ ಮಾಸ್ಟರ್ ಪ್ಲ್ಯಾನ್ ರಚಿಸಲು ನಮ್ಮ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಹಂತ ಹಂತವಾಗಿ ಸೌಲಭ್ಯ ಕಲ್ಪಿಸಲಾಗುವುದು. ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರೆ 15 ದಿನದಲ್ಲಿ ಅನುಮೋದನೆ ಕೊಡಿಸುವೆ. ಸಂಪೂರ್ಣ ಅಭಿವೃದ್ಧಿ ಆಗುವವರೆಗೆ ತಾತ್ಕಾಲಿಕವಾಗಿ ಸ್ನಾನಘಟ್ಟ, ಶೌಚಗೃಹಗಳನ್ನು ನಿರ್ಮಿಸಲಾಗುವುದು ಎಂದರು.
ಅಂಜನಾದ್ರಿ ಅಭಿವೃದ್ಧಿಗೆ 121 ಕೋಟಿ: ಅಂಜನಾದ್ರಿಯಲ್ಲಿ ಸದ್ಯ 21 ಕೋಟಿ ರೂಪಾಯಿ ಯೋಜನೆ ಕಾಮಗಾರಿ ನಡೆದಿದೆ. ಹಿಂದಿನ ಸರ್ಕಾರ ಒಳ್ಳೆಯ ಉದ್ದೇಶದಿಂದ ಹಣ ಘೋಷಣೆ ಮಾಡಿದೆ. ಅಂಜನಾದ್ರಿ ಅಭಿವೃದ್ಧಿಗೆ ಒಟ್ಟು 121 ಕೋಟಿ ರೂಪಾಯಿ ವ್ಯಯಿಸಲಾಗುವುದು ಎಂದು ತಿಳಿಸಿದರು.
ಕೆಎಸ್ಆರ್ಟಿಸಿಗೆ 9 ಸಾವಿರ ಸಿಬ್ಬಂದಿ ನೇಮಕಾತಿ: ಫೆಬ್ರವರಿ ವೇಳೆಗೆ ಸಾರಿಗೆ ಇಲಾಖೆಯಿಂದ 9 ಸಾವಿರ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಮತ್ತು 5,500 ಬಸ್ಗಳನ್ನು ಖರೀದಿಸಲಾಗುತ್ತದೆ ಎಂದರು.
ಇದನ್ನೂ ಓದಿ:ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಯಲ್ಲಿ ಎಡವಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ
35 ಸಾವಿರ ಬಸ್ಗಳ ಅಗತ್ಯ ಇದೆ: ಇತ್ತೀಚಿಗೆ, ಬೆಂಗಳೂರಿನಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಕ್ತಿ ಯೋಜನೆಯಿಂದಾಗಿ ನಮಗೆ ಬಸ್ಗಳ ಕೊರತೆಯಾಗಿಲ್ಲ. ನಾನು ಈ ಹಿಂದೆ ಸಾರಿಗೆ ಸಚಿವನಾಗಿದ್ದಾಗ ನಾಲ್ಕು ಸಾರಿಗೆ ನಿಗಮಗಳಿಂದ ಸೇರಿ ಒಟ್ಟು 24 ಸಾವಿರ ಬಸ್ಗಳಿದ್ದವು. ಆದರೆ, 10 ವರ್ಷವಾದರೂ ಈಗ ಬಸ್ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಬದಲಿಗೆ 1 ಸಾವಿರ ಸಂಖ್ಯೆ ಕಡಿಮೆಯಾಗಿದ್ದು, 23 ಸಾವಿರ ಆಗಿದೆ. ನಮಗೆ 35 ಸಾವಿರ ಬಸ್ಗಳ ಅಗತ್ಯ ಇದೆ. ಆ ನಿಟ್ಟಿನಲ್ಲಿ ನಾವು ಬಸ್ ವ್ಯವಸ್ಥೆಗೆ ಮುಂದಾಗಲಿದ್ದೇವೆ ಎಂದು ಸಚಿವರು ಹೇಳಿದ್ದರು.