ಕೊಪ್ಪಳ : ಗ್ರಾಮ ಪಂಚಾಯತ್ ಮೂಲಕ ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಜನಸೇವೆ ಮಾಡುವಂತೆ ಸಚಿವ ಜಗದೀಶ್ ಶೆಟ್ಟರ್ ಕರೆ ನೀಡಿದರು.
ನಗರದ ಶಿವಶಾಂತವೀರ ಮಂಗಲ ಭವನದ ಆವರಣದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಸಚಿವ ಶೆಟ್ಟರ್, ರಾಜ್ಯದಲ್ಲಿ ಇತ್ತೀಚಿಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಅಧಿಕ ಸಂಖ್ಯೆಯಲ್ಲಿ ಚುನಾಯಿತರಾಗಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದವರು ತಮ್ಮ ಪಕ್ಷದ ಬೆಂಬಲಿತರು ಜಾಸ್ತಿ ಆಯ್ಕೆಯಾಗಿದ್ದಾರೆ ಎಂದು ಹೇಳುತ್ತಾರೆ.
ಓದಿ: ಮುನಿರತ್ನಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನಮಗೂ ಬೇಸರವಿದೆ: ಸಚಿವ ಎಂಟಿಬಿ ನಾಗರಾಜ್
ಜನರು ನೀಡಿರುವ ಈ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸಬೇಕು. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ಕೊಡಿಸಬೇಕು. ಬಿಜೆಪಿಯವರ ಮೇಲೆ ಜನರ ನಿರೀಕ್ಷೆ ಬಹಳ ಇದೆ. ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳು ಅತ್ಯಂತ ಪಾರದರ್ಶಕತೆಯಿಂದ, ಪ್ರಮಾಣಿಕತೆಯಿಂದ ಕೆಲಸ ಮಾಡಬೇಕು.
ಗ್ರಾಪಂಗೆ ಬರುವ ಅನುದಾನ, ಯೋಜನೆಗಳನ್ನು ಸಮರ್ಪಕವಾಗಿ ಬಳಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಆಗ ನಿಮಗೂ ಗೌರವ ಬರುತ್ತದೆ, ಪಕ್ಷಕ್ಕೂ ಗೌರವ ಬರುತ್ತದೆ ಎಂದರು. ಇನ್ನು, ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ. ಅಲ್ಲಿ ಯಾರು ಸಿಎಂ ಆಗಬೇಕು ಎಂದು ಜಗಳ ಶುರುವಾಗಿದೆ.
ಅಲ್ಲಿ ಕಾರ್ಯಕರ್ತರ ಪಡೆ ಇಲ್ಲ, ಕಾರ್ಯಕರ್ತರಿಗೆ ಕಿಮ್ಮತ್ತು ಇಲ್ಲ. ಅದೊಂದು ಕುಟುಂಬದ ಪಾರ್ಟಿ, ನಿರಂತರ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ ಪಕ್ಷ. ಕಾಂಗ್ರೆಸ್ ಹಳ್ಳಿಯಲ್ಲಿಯೂ ಉಳಿಯಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಸಮಾವೇಶದಲ್ಲಿ ಸಚಿವರಾದ ಪ್ರಭು ಚೌಹಾಣ್, ಶಶಿಕಲಾ ಜೊಲ್ಲೆ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್ ಸೇರಿ ಮೊದಲಾದವರು ಮಾತನಾಡಿದರು.