ಕೊಪ್ಪಳ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಕಳೆದೆರಡು ದಿನಗಳಿಂದ ಬೆಂಗಾವಲು ಪಡೆ ಇಲ್ಲದೆ ಓಡಾಡುತ್ತಿದ್ದಾರೆ. ಸಚಿವರ ಈ ನಿರ್ಧಾರಕ್ಕೆ ರಾಜಕೀಯ ಕಾರಣ ಎನ್ನಲಾಗುತ್ತಿದೆ.
ಮಾಜಿ ಸಚಿವ ಬಸವರಾಜ ರಾಯರೆಡ್ಡಿಗೆ ಅಗತ್ಯಗಿಂತ ಹೆಚ್ಚಿನ ಭದ್ರತೆ ನೀಡಿದ್ದಕ್ಕೆ ಸಚಿವ ಹಾಲಪ್ಪ ಆಚಾರ್ ತಮಗೆ ಸರ್ಕಾರ ನೀಡಿದ್ದ ಭದ್ರತೆ ತಿರಸ್ಕರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ಎರಡು ದಿನಗಳಿಂದ ಬಸವರಾಜ ರಾಯರೆಡ್ಡಿ ಸಹ ಯಲಬುರ್ಗಾದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಸಚಿವ ಹಾಲಪ್ಪ ಆಚಾರ್ ಸಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ಈ ಮಧ್ಯೆ ರಾಯರೆಡ್ಡಿಗೆ ಅಗತ್ಯಗಿಂತ ಅಧಿಕ ಭದ್ರತೆ ನೀಡಿದ್ದಾರೆ ಎಂಬ ಕಾರಣಕ್ಕೆ ಆಚಾರ್ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಕಾರಣಕ್ಕೆ ತಮಗೆ ನೀಡಿರುವ ಭದ್ರತೆ ಹಿಂಪಡೆಯಿರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಸ್ವತಃ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿದ್ದು, ಇದರಲ್ಲಿ ಅಂತಹ ವಿಶೇಷವೇನಿಲ್ಲ. ನಾನು ಸರಳವಾಗಿರಲು ಬಯಸುತ್ತೇನೆ. ನನಗೆ ಭಯವಿಲ್ಲ, ಕ್ಷೇತ್ರದ ಜನರೊಂದಿಗಿದ್ದೇನೆ. ಅದಕ್ಕಾಗಿ ಬೆಂಗಾವಲು ಪಡೆ ಭದ್ರತೆ ಬೇಡವೆಂದಿದ್ದೇನೆ. ಪೊಲೀಸರಿಗೆ ಸಾಕಷ್ಟು ಕೆಲಸವಿದೆ. ಅವರು ನನಗೆ ಭದ್ರತೆ ನೀಡುವುದರಿಂದ ಅವರ ಸಮಯ ವ್ಯರ್ಥವಾಗುತ್ತದೆ. ಜೊತೆಗೆ ಕೆಲಸ ಸಹ ವಿಳಂಬವಾಗುತ್ತದೆ. ಈ ಕಾರಣಕ್ಕಾಗಿ ಭದ್ರತೆ ಬೇಡ ಎಂದಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.