ಕೊಪ್ಪಳ: ಮುಂದೆ ಉತ್ತರ ಕರ್ನಾಟಕದವರು ಅಥವಾ ದಕ್ಷಿಣ ಕರ್ನಾಟಕದವರು ಸಿಎಂ ಆಗ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸದ್ಯಕ್ಕಂತೂ ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಮಳೆಯಿಂದಾಗಿ ಕೊಚ್ಚಿ ಹೋಗಿರುವ ತಾಲೂಕಿನ ಕೋಳೂರು ಬ್ರಿಡ್ಜ್ ಕಂ ಬ್ಯಾರೇಜ್ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪಕ್ಷದ ವರಿಷ್ಠರು, ಸಿಎಂ ವಿರುದ್ಧ ಹೇಳಿಕೆ ನೀಡೋದು ಸರಿಯಲ್ಲ. ಅದು ಅಶಿಸ್ತು ಆಗುತ್ತದೆ. ಮುಂದಿನ ಮೂರು ವರ್ಷಗಳ ಬಳಿಕ ಚುನಾವಣೆ ನಡೆದು ನಂತರ ಯಾರು ಸಿಎಂ ಆಗ್ತಾರೆ ಎಂಬುದನ್ನು ಪಕ್ಷದ ವರಿಷ್ಠರು, ಶಾಸಕಾಂಗ ಪಕ್ಷದ ಸಭೆ ನಿರ್ಧಾರ ಮಾಡಲಿದೆ ಎಂದರು.
ನಾನು ದಕ್ಷತೆ, ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇನೆ. ಕೃಷಿ ಇಲಾಖೆ ತುಕ್ಕು ಹಿಡಿದಿತ್ತು. ನಾನು ಕೃಷಿ ಸಚಿವನಾದ ಬಳಿಕ ಇಲಾಖೆಯನ್ನು ಚುರುಕುಗೊಳಿಸಿದ್ದೇನೆ. ಇಂತಹ ಸಂದರ್ಭದಲ್ಲಿ ಕೆಲವರಿಗೆ ನೋವಾಗುತ್ತೆ. ನೋವಾದ ಸಂದರ್ಭದಲ್ಲಿ ಅನಾಮಧೇಯ ಪತ್ರ ಬರೆದು ಹೆದರಿಸಲು ಬಂದ್ರೆ ಹೆದರುವುದಿಲ್ಲ.
ಅಲ್ಲದೆ ಆರೋಪ ಮಾಡಿದವರು ಬಂದು ನೇರವಾಗಿ ಹೇಳಿದರೆ ತನಿಖೆಯಾಗುತ್ತದೆ. ಆದರೆ ಈ ರೀತಿ ಅಪಪ್ರಚಾರ ಮಾಡಿದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದರು. ಮಳೆಯಿಂದಾಗಿ ಬೆಳೆಗಳು ಹಾಳಾಗಿವೆ. ಮನೆಗಳು ಕುಸಿದಿವೆ. ಕೊಪ್ಪಳ ಜಿಲ್ಲೆಯಲ್ಲಿಯೂ ಮಳೆಯಿಂದ ಆಗಿರುವ ಹಾನಿ ಕುರಿತು ಪರಿಶೀಲನೆ ನಡೆಸಿ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾನಿ ಕುರಿತು ಸಿಎಂಗೆ ವರದಿ ಸಲ್ಲಿಸಲಾಗುವುದು ಎಂದರು.
ಕೋಳೂರು ಬ್ರಿಡ್ಜ್ ಕಂ ಬ್ಯಾರೇಜ್ 5 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಮಳೆಗೆ ಕೊಚ್ಚಿ ಹೋಗಿರೋದು ಕಾಮಗಾರಿ ಕಳಪೆಯಾಗಿದೆ ಎಂಬುದನ್ನು ತೋರಿಸುತ್ತದೆ. ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಮಗಾರಿ ನಡೆದ ಸಂದರ್ಭದಲ್ಲಿ ಇದ್ದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.