ಕೊಪ್ಪಳ: ಸಿಎಂ ಬದಲಾವಣೆಯಾಗುತ್ತಾರೆ ಎಂದು ಯಾರು ಹೇಳಿದರು?. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೂ. 7ರ ಶಾಸಕಾಂಗ ಸಭೆಯ ಬಗ್ಗೆ ನನಗೆ ಗೊತ್ತಿಲ್ಲ. ಕೊರೊನಾ ಹರಡುವಿಕೆಯ ಸಂದರ್ಭವಿದೆ. ಇಂತಹ ಸಂದರ್ಭದಲ್ಲಿ ಶಾಸಕಾಂಗದ ಸಭೆ ನಡೆಸಬಹುದು. ಆದರೆ ಸಿಎಂ ಬದಲಾವಣೆಯಾಗುತ್ತಾರೆ ಎಂಬ ಪುಕಾರು ಅವರು ಸಿಎಂ ಆದಾಗಿನಿಂದಲೂ ಇದೆ. ಯಡಿಯೂರಪ್ಪ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಅವರೇ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮದಲ್ಲಿ ಬಂದಿದೆ. ಪ್ರಕರಣದ ಕುರಿತು ಎಸ್ಐಟಿ ತನಿಖೆಯಾಗುತ್ತಿದೆ. ತನಿಖೆ ನಡೆಯುತ್ತಿರುವುದರಿಂದ ಈ ಬಗ್ಗೆ ನಾನು ಈಗ ಏನೂ ಹೇಳುವುದಿಲ್ಲ ಎಂದರು.
ಲಾಕ್ಡೌನ್ ನಂತರ ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಕೊರೊನಾ ಸೋಂಕಿತರ ಪಾಸಿಟಿವಿಟಿ ದರ ಹಾಗೂ ಸಾವಿನ ಪ್ರಕರಣಗಳು ಕಡಿಮೆಯಾಗಿವೆ. ನಾವು ತೆಗೆದುಕೊಂಡ ಕಠಿಣ ಕ್ರಮದಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಜಿಲ್ಲೆಯಲ್ಲಿ ಮದುವೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ. ನಮ್ಮ ಜಿಲ್ಲೆಯ ಕಠಿಣ ಕ್ರಮವನ್ನು ಬೇರೆ ಜಿಲ್ಲೆಯವರು ಅನುಸರಿಸುತ್ತಿದ್ದಾರೆ. ಹೋಂ ಐಸೋಲೇಷನ್ ನಲ್ಲಿರುವ ಒಂದು ಸಾವಿರಕ್ಕೂ ಅಧಿಕ ಜನರನ್ನು ಈಗ ಕೊವಿಡ್ ಸೆಂಟರ್ಗೆ ಸೇರಿಸಲಾಗಿದೆ ಎಂದು ಸಚಿವರು ಇದೇ ಸಂದರ್ಭ ಹೇಳಿದರು.
ಓದಿ: ಕೊರೊನಾ ಕಾಲದಲ್ಲಿ ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಗುಸು ಗುಸು: ವರಿಷ್ಠರ ಪ್ಲಾನ್ ಏನು?