ಕೊಪ್ಪಳ: ಕೃಷಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಇಂದು ನಗರದ ಜಿಲ್ಲಾಸ್ಪತ್ರೆಯಲ್ಲಿನ ಕೋವಿಡ್ ವಾರ್ಡಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪಿಪಿಇ ಕಿಟ್ ಧರಿಸಿದ ಅವರು, ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ವಾರ್ಡಿಗೆ ತೆರಳಿ ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಈಗ ಜಿಲ್ಲೆಯಲ್ಲಿ ಸದ್ಯ ಬೆಡ್, ಆಕ್ಸಿಜನ್, ರೆಮಿಡಿಸಿವಿಯರ್ ಕೊರತೆಯಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಸದ್ಯ 106 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇನ್ನೂ 35 ಬೆಡ್ಗಳು ಖಾಲಿ ಇವೆ. ಇನ್ನಷ್ಟು ಬೆಡ್ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸೋಂಕಿತರು ತಡವಾಗಿ ಆಸ್ಪತ್ರೆಗೆ ಬರುತ್ತಿರುವುದೇ ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಸೋಂಕಿನ ಲಕ್ಷಣಗಳು ಕಂಡಕೂಡಲೇ ಬೇಗ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನೀಡಲಾಗುವುದು. ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುವುದು. ಈಗ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಜನರ ಸಹಕಾರ ನಮಗೆ ಈಗ ಅಗತ್ಯವಿದೆ. ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಲಾಕ್ಡೌನ್ ಅನಿವಾರ್ಯವಾಗಬಹುದು ಎಂದು ಹೇಳಿದರು. ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಸೇರಿದಂತೆ ಕಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯರುಗಳು ಸಚಿವರಿಗೆ ಸಾಥ್ ನೀಡಿದರು.
ಓದಿ: ಬೆಡ್ ಬ್ಲಾಕಿಂಗ್ ಕುರಿತು ಧ್ವನಿಯೆತ್ತಿದ್ದಕ್ಕಾಗಿ ನಮ್ಮ ಮೇಲೆಯೇ ಆರೋಪ: ಶಾಸಕ ಸತೀಶ್ ರೆಡ್ಡಿ