ಕೊಪ್ಪಳ: ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ಜಿಲ್ಲೆಗೆ ಆಗಮಿಸಿದ್ದರು.
ಮೊದಲು ಸಚಿವರು ನಗರದ ಗವಿಮಠಕ್ಕೆ ತೆರಳಿ ಸಚಿವರು, ಗದ್ದುಗೆಯ ದರ್ಶನ ಪಡೆದುಕೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ್ಮ ದಿನದ ಶುಭಾಶಯ ತಿಳಿಸಿದರು.
ಯಡಿಯೂರಪ್ಪನವರು ಸುಮಾರು 6 ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಇಂತಹ ಧೀಮಂತ ನಾಯಕನ ಜನ್ಮ ದಿನವನ್ನು ರಾಜ್ಯವಲ್ಲದೆ ಅನೇಕ ಕಡೆ ಅವರ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪನವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಸಚಿವರು ತಿಳಿಸಿದರು.
ಇದಕ್ಕೂ ಮೊದಲು ನಗರದಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯ ಕಟ್ಟಡದ ಕಾಮಗಾರಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.