ಕುಷ್ಟಗಿ(ಕೊಪ್ಪಳ): ಕೊರೊನಾ ವೈರಸ್ ಮಾವು ಮಾರಾಟಗಾರರ ಆದಾಯಕ್ಕೂ ಕತ್ತರಿ ಹಾಕಿದೆ. ಇಲ್ಲಿನ ರಾಜ್ಯ ಹೆದ್ದಾರಿ ಬದಿಯಲ್ಲಿ ಆಕರ್ಷಿಸುವ ಹಣ್ಣುಗಳಿದ್ದರೂ ಗ್ರಾಹಕರಿಲ್ಲದೆ ಮಾರಾಟಗಾರರು ಕಂಗಾಲಾಗಿದ್ದಾರೆ.
ಲಾಕ್ಡೌನ್ನಿಂದಾಗಿ ವ್ಯಾಪಾರ ಸಂಪೂರ್ಣ ಕುಂಠಿತಗೊಂಡಿದೆ. ದಿನವಿಡೀ ನಿಂತರೂ ಮಾವು ಮಾರಾಟ ಅಷ್ಟಕ್ಕಷ್ಟೇ ಆಗಿದೆ. ಗ್ರಾಹಕರು ಬರುತ್ತಿಲ್ಲ. ನಮಗೂ ಹೊಟ್ಟೆ ತುಂಬುತ್ತಿಲ್ಲ. ಹೀಗಾದರೆ ನಮ್ಮ ಕಷ್ಟಗಳನ್ನು ಯಾರಿಗೆ ಹೇಳಿಕೊಳ್ಳೋಣ ಎಂದು ಅಳಲು ತೋಡಿಕೊಳ್ಳುತ್ತಾರೆ ಮಾವು ಮಾರಾಟಗಾರ ವೀರಾಪೂರ ಗ್ರಾಮದ ಬ್ರಹ್ಮಾನಂದ ಲೋಕರೆ.
ಗಂಗಾವತಿ-ಲಿಂಗಸುಗೂರು ರಾಜ್ಯ ಹೆದ್ದಾರಿಯ ವಿರುಪಾಪುರ ಕ್ರಾಸ್ನಲ್ಲಿ ಬ್ರಹ್ಮಾನಂದ ಎಂಬ ದಂಪತಿ ಹಣ್ಣುಗಳನ್ನು ಮಾರಿ ಬದುಕು ಕಟ್ಟಿಕೊಂಡವರು. ಕಳೆದ ವರ್ಷದಷ್ಟು ಉತ್ತಮ ಆದಾಯ ಈಗಿಲ್ಲ. ಉತ್ಕೃಷ್ಟವಾದ ಹಣ್ಣುಗಳಿದ್ದರೂ ಗ್ರಾಹಕರು ಕೊರೊನಾಗೆ ಹೆದರಿ ಹಣ್ಣು ನೋಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಮನಸ್ಸಿಗೆ ತೋಚಿದ ಬೆಲೆಗೆ ಕೇಳುತ್ತಾರೆ ಎನ್ನುತ್ತಾರೆ ಬ್ರಹ್ಮಾನಂದ.
ಕೆಲವೊಮ್ಮೆ ಮಾತ್ರ ಉತ್ತಮ ವ್ಯಾಪಾರ ಆಗುತ್ತದೆ. ಕಳೆದ ವರ್ಷ ಪ್ರತಿ ದಿನ 8,000-10,000 ರೂ.ವರೆಗೂ ಮಾರಾಟವಾಗುತ್ತಿತ್ತು. ಈಗ ಹಾಕಿದ ಬಂಡವಾಳವೂ ಬರದಂತಾಗಿದೆ. ಈ ಭಾಗದಲ್ಲಿ ಮಾವು ಬೆಳೆಗಾರರಿದ್ದಾರೆ. ಅವರಿಂದ ಮಾವಿನ ವಿವಿಧ ತಳಿಗಳನ್ನು ಖರೀದಿಸಿ ಮಾರಲಾಗುತ್ತಿದೆ ಎಂದರು.