ಕೊಪ್ಪಳ: ಚಿಕಿತ್ಸೆಗೆಂದು ದೂರದ ಆಂಧ್ರಕ್ಕೆ ಹೋಗಿದ್ದ ಆ ತಾಯಿ - ಮಗ ಲಾಕ್ ಡೌನ್ ನಿಂದ ವಾಪಸ್ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಇವರ ಕಷ್ಟ ನೋಡಿದ ವ್ಯಕ್ತಿಯೊಬ್ಬ ಆ ತಾಯಿ - ಮಗನನ್ನು ಟಿವಿಎಸ್ ಎಕ್ಸ್ ಎಲ್ ವಾಹನದ ಮೂಲಕ ಕೊಪ್ಪಳಕ್ಕೆ ತಂದು ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ವ್ಯಕ್ತಿಯೊಬ್ಬರು.
ಕೊಪ್ಪಳದ ಸಿದ್ದೇಶ್ವರ ನಗರದ ನಿವಾಸಿಗಳಾದ ರೇಣುಕಾ ಹಾಗೂ ಆಕೆಯ ಮಗ ನವೀನ್ ನನ್ನು ಅಶೋಕ್ ಎಂಬುವವರು ಪುಟ್ಟಪರ್ತಿಯಿಂದ ಕೊಪ್ಪಳಕ್ಕೆ ಟಿವಿಎಸ್ ಎಕ್ಸ್ಎಲ್ ವಾಹನದ ಮೂಲಕ ಕರೆದುಕೊಂಡು ಬಂದು ಬಿಟ್ಟಿದ್ದಾರೆ.
ರೇಣುಕಾ ಅವರು ತಮ್ಮ ಮಗ ನವೀನ್ಗೆ ಇರುವ ಹೃದಯ ಸಂಬಂಧಿತ ಕಾಯಿಲೆ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಸುಮಾರು ನಾಲ್ಕು ತಿಂಗಳ ಹಿಂದೆ ಹೋಗಿದ್ದರು. ರೇಣುಕಾ ಪತಿ ಲಾಕ್ಡೌನ್ಗೆ ಮುಂಚೆಯೆ ಕೊಪ್ಪಳಕ್ಕೆ ಹಿಂತಿರುಗಿದ್ದರು. ರೇಣುಕಾ ಅವರು ಮಗ ನವೀನ್ ಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಪುಟ್ಟಪರ್ತಿಯಲ್ಲೇ ಉಳಿದುಕೊಂಡಿದ್ದರು.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿದ್ದರಿಂದ ರೇಣುಕಾ ಹಾಗೂ ಅವರ ಮಗ ನವೀನ್ ಪುಟ್ಟಪರ್ತಿಯಲ್ಲಿ ಸಿಲುಕಿಕೊಂಡಿದ್ದರು. ವಾಪಸ್ ಕೊಪ್ಪಳಕ್ಕೆ ಬರಲಾಗದೇ ಪರದಾಡುತ್ತಿದ್ದರು. ಇವರ ಸಂಕಷ್ಟ ಗಮನಿಸಿದ ಕಲಬುರ್ಗಿ ಮೂಲದ ಅಶೋಕ್ ಎಂಬುವವರು ಪುಟ್ಟಪರ್ತಿಯಿಂದ ಟಿವಿಎಸ್ ಎಕ್ಸ್ಎಲ್ ವಾಹನದಲ್ಲಿ ಈ ಇಬ್ಬರನ್ನು ಕೊಪ್ಪಳಕ್ಕೆ ಕರೆ ತಂದಿದ್ದಾರೆ.
ಸತತ 14 ಗಂಟೆಗಳ ಕಾಲ ಆ ಟಿವಿಎಸ್ ಎಕ್ಸೆಲ್ ವಾಹನದಲ್ಲಿ ಪ್ರಯಾಣ ಮಾಡಿ ಕೊಪ್ಪಳಕ್ಕೆ ತಲುಪಿದ್ದಾರೆ. ಪುಟ್ಟಪರ್ತಿಯಿಂದ ಟಿವಿಎಸ್ ಎಕ್ಸೆಲ್ ಬೈಕ್ ಮೂಲಕ ಹೊರಟು ಧರ್ಮಾವರಂ, ಅನಂತಪುರ, ಗುತ್ತಿ, ಬಳ್ಳಾರಿ, ಹೊಸಪೇಟೆ ಮಾರ್ಗವಾಗಿ ಸುಮಾರು 271 ಕಿ.ಮೀ. ದೂರ ಕ್ರಮಿಸಿ ಸುರಕ್ಷಿತವಾಗಿ ಕೊಪ್ಪಳಕ್ಕೆ ಬಂದು ತಲುಪಿಸಿದ್ದಾರೆ.
ಹಣವೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ತಾಯಿ ಮಗನನ್ನು ಕೊಪ್ಪಳಕ್ಕೆ ತಲುಪಿಸುವ ಅಶೋಕ್ ಅವರು ಮಾನವೀಯತೆ ಮೆರೆದಿದ್ದಾರೆ. ದೂರದೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತಮ್ಮನ್ನು ಕೊಪ್ಪಳಕ್ಕೆ ತಲುಪಿಸಿದ ಅಶೋಕ್ ಅವರಿಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.