ಕೊಪ್ಪಳ: ಮೆಕ್ಕೆಜೋಳವನ್ನು ಹೊರಗಡೆಯಿಂದ ಖರೀದಿಸಿ ಲೋಡ್ ಮಾಡಿಕೊಂಡು ಬಂದ ನೂರಾರು ಲಾರಿಗಳನ್ನು ಎಪಿಎಂಸಿ ಆವರಣದಲ್ಲಿ ನಿಲ್ಲಿಸುತ್ತಿರುವುದರಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಎಪಿಎಂಸಿ ವರ್ತಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಎಪಿಎಂಸಿಯಲ್ಲಿ ನಡೆಯಿತು.
ನೂರಾರು ಲಾರಿಗಳು ಎಪಿಎಂಸಿ ಯಾರ್ಡ್ನಲ್ಲಿ ನಿಂತ ಪರಿಣಾಮ ಸಾರ್ವಜನಿಕರಿಗೆ, ವರ್ತಕರಿಗೆ ತೊಂದರೆಯುಂಟಾಗುತ್ತಿದೆ ಎಂದು ವರ್ತಕರು ಆರೋಪಿಸಿದ್ದಾರೆ.
ಇಬ್ಬರು ಖರೀದಿದಾರರು ಮೆಕ್ಕೆಜೋಳವನ್ನು ಹೊರಗಡೆಯಿಂದ ಖರೀದಿಸಿಕೊಂಡು ಬಂದು ಲಾರಿಗಳಲ್ಲಿ ಲೋಡ್ ಮಾಡಿ ಎಪಿಎಂಸಿಯಲ್ಲಿ ನಿಲ್ಲಿಸುತ್ತಾರೆ. ಎಪಿಎಂಸಿ ಬಳಿ ಇರುವ ವೇಬ್ರಿಡ್ಜ್ನಲ್ಲಿ ಆ ಲೋಡ್ ಗಾಡಿಗಳನ್ನು ತೂಕ ಮಾಡಿಸುತ್ತಾರೆ. ಎಪಿಎಂಸಿಯಲ್ಲಿ ತುಂಬಿದ ಲಾರಿಗಳನ್ನು ನಿಲ್ಲಿಸುವುದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಎಪಿಎಂಸಿಯಲ್ಲಿ ಲಾರಿ ನಿಲ್ಲಿಸಲು ಸೆಸ್ ಪಡೆಯಬೇಕು, ಆದರೆ ಎಪಿಎಂಸಿ ಕಾರ್ಯದರ್ಶಿ ಸೆಸ್ ಪಡೆಯುತ್ತಿಲ್ಲ. ಈ ಬಗ್ಗೆ ಎಪಿಎಂಸಿಯ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ವರ್ತಕರ ಪ್ರತಿನಿಧಿ ನೇಮರಡ್ಡಿ ತಿಳಿಸಿದ್ದಾರೆ.
ಇನ್ನು ಖರೀದಾರರು ಮೆಕ್ಕೆಜೋಳ ಖರೀದಿಸಿದರೆ ಸೆಸ್ ಹಾಕಲು ಬರುವುದಿಲ್ಲ. ವೇಬ್ರಿಡ್ಜ್ ಮುಖ್ಯರಸ್ತೆಯಲ್ಲಿರುವುದರಿಂದ ಅಲ್ಲಿ ಲಾರಿಗಳನ್ನು ನಿಲ್ಲಿಸಿದರೆ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಲಾರಿಗಳನ್ನು ಎಪಿಎಂಸಿಯಲ್ಲಿ ನಿಲ್ಲಿಸುತ್ತಾರೆ. ಈಗ ಇಲ್ಲಿ ನಿಲ್ಲಿಸದಂತೆ ಖರೀದಿದಾರರಿಗೆ ಹೇಳಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ತಿಳಿಸಿದರು.