ಗಂಗಾವತಿ : ಬಹುಕೋಟಿ ಒಡೆಯರಾದ ಅಂಬಾನಿ ಮತ್ತು ಅದಾನಿ ಪರವಾಗಿ ಕೇಂದ್ರ ಸರ್ಕಾರ ನಿಲ್ಲುತ್ತಿದೆ. ರೈತರ ಕುಣಿಕೆಗೆ ಹಗ್ಗ ಹಾಕುತ್ತಿದೆ. ಹೀಗಾಗಿ ಈ ಕೋಟ್ಯಾಧಿಪತಿಗಳ ಕಂಪನಿಗಳು ತಯಾರಿಸುವ ಉತ್ಪನ್ನಗಳು, ವಿವಿಧ ಸೇವೆಗಳನ್ನು ತಿರಸ್ಕರಿಸುವ ಮೂಲಕ ರೈತರ ಪರ ನಿಲ್ಲೋಣ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕರೆ ನೀಡಿದರು.
ಗಂಗಾವತಿಯಲ್ಲಿ ಆರಂಭವಾದ ಜಾಥಾ ಕಂಪ್ಲಿ, ಕಾರಟಗಿ ತಾಲೂಕುಗಳಲ್ಲಿ ಸಂಚರಿಸಲಿದೆ. ಜನವರಿ 12ರಂದು ಜಿಲ್ಲಾ ಕೇಂದ್ರಗಳಲ್ಲಿ ರೈತರೊಂದಿಗೆ ದಾಸೋಹ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘಟನೆಯ ಸಂಚಾಲಕ ಗುರು ಬಸವ ಮಾಹಿತಿ ನೀಡಿದರು.
ಬಹುಜನ ವಿದ್ಯಾರ್ಥಿ ಸಂಘ ನಗರದಲ್ಲಿ ಹಮ್ಮಿಕೊಂಡಿದ್ದ ಹಳ್ಳಿ ಉಳಿಸಿ ಅಭಿಯಾನ ಹಾಗೂ ರೈತರ ಪರ ಸೈಕಲ್ ಜಾಥಾಗೆ ಅವರು ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಅನ್ನದಾತರು ಅಪಾಯದಲ್ಲಿದ್ದಾರೆ. ಅವರು ಬೆಳೆದ ಉತ್ಪನ್ನಕ್ಕೆ ಸರಿಯಾದ ಬೆಲೆ, ಮಾರುಕಟ್ಟೆ ಸಿಗುತ್ತಿಲ್ಲ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳು ಕಾರಣ ಎಂದು ಆರೋಪಿಸಿದರು.
ಮತ್ತೊಬ್ಬ ಬಂಡಾಯ ಸಾಹಿತಿ ಪೀರಬಾಷಾ ಮಾತನಾಡಿ, ದೇಶದಲ್ಲಿ ಜನರನ್ನು ಧರ್ಮ, ಜಾತಿಗಳ ಆಧಾರದ ಮೇಲೆ ಇಬ್ಭಾಗಿಸಲಾಗುತ್ತಿದೆ. ರೈತರನ್ನು ಶೋಷಿಸುವ ಮೂಲಕ ಆಳುವ ಸರ್ಕಾರಗಳು ನಮ್ಮ ದೇಶದ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ. ಈಗಾಗಲೇ ಚಾಲ್ತಿಯಲ್ಲಿರುವ ರೈತರ ದಂಗೆ ಯಾವುದೇ ಸಂದರ್ಭದಲ್ಲಿ ಕ್ರಾಂತಿಕಾರಿ ರೂಪ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.