ಗಂಗಾವತಿ (ಕೊಪ್ಪಳ) : ಹನುಮದ್ ವ್ರತದ ಅಂಗವಾಗಿ ತಾಲೂಕಿನ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ ನಡೆದ ಹನುಮಮಾಲಾ ವಿಸರ್ಜನೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಹನುಮಮಲಾಧಾರಿಗಳು ಹಾಗೂ ಭಕ್ತಾಧಿಗಳು ಆಗಮಿಸಿದ್ದರು. ಏಕಕಾಲಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಇಡೀ ಬೆಟ್ಟ ಕೇಸರಿಮಯವಾಗಿತ್ತು.
ಭಕ್ತರ ದಟ್ಟಣೆ ನಡುವೆ ಎಲ್ಲೆಲ್ಲೂ ಹನುಮನಾಮ ಜಪ ಮೊಳಗಿತ್ತು. ಶನಿವಾರ ರಾತ್ರಿಯಿಂದಲೇ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿ, ವಾಪಸ್ ಆಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹನುಮಮಾಲೆ ಧರಿಸಿಕೊಂಡು ಬಂದ ಸಾವಿರಾರು ಭಕ್ತರ ಕೈಯಲ್ಲಿ ಹನುಮ, ರಾಮರ ಚಿತ್ರಗಳು ರಾರಾಜಿಸಿದವು. ಮುಖ್ಯವಾಗಿ ನಟ ಪುನೀತ್ ರಾಜ್ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳು ಕಂಡು ಬಂದವು.
ಇಡೀ ಬೆಟ್ಟದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಕಿಕ್ಕಿರಿದು ಭಕ್ತರು ತುಂಬಿದ್ದಾರೆ. ಪಾದಗಟ್ಟೆಯಿಂದ ಬೆಟ್ಟಕ್ಕೆ ಹತ್ತುವ ಮತ್ತು ವೇದಪಾಠ ಶಾಲೆಯಿಂದ ಕೆಳಗೆ ಇಳಿಯಲು ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿದ್ದರಿಂದ ಭಕ್ತರು ನಿರಾಯಾಸವಾಗಿ ಬೆಟ್ಟ ಏರಿ ದೇವರ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ ಮೂರು ಗಂಟೆಯಿಂದಲೇ ಹನುಮಂತ ದೇವರ ವಿಗ್ರಹಕ್ಕೆ ಪೂಜೆ ಆರಂಭವಾಗಿದೆ. ಇಡೀ ದೇಗುಲದ ಒಳಾಂಗಣವನ್ನು ಆಕರ್ಷಕವಾಗಿ ಹೂವು, ಬಾಳೆ ಎಲೆ, ತೆಂಗಿನ ಗರಿಯಿಂದ ಅಲಂಕರಿಸಲಾಗಿತ್ತು.
ಕುಡಿಯುವ ನೀರು, ಸ್ನಾನ, ವಸತಿ, ಶೌಚಾಲಯ, ಊಟ, ಪಾರ್ಕಿಂಗ್, ಆರೋಗ್ಯ, ಸೇವಾ ಕೇಂದ್ರ, ಸಹಾಯವಾಣಿ ಸೇರಿದಂತ ಸಾವಿರಾರು ಭಕ್ತರಿಗೆ ಜಿಲ್ಲಾಡಳಿತ ಅಚ್ಚುಕಟ್ಟಾದ ಹಲವು ವ್ಯವಸ್ಥೆಗಳನ್ನು ಮಾಡಿದ್ದು, ಭಕ್ತರ ಪ್ರಶಂಸೆಗೆ ಪಾತ್ರವಾಗಿದೆ. ವೇದಪಾಠ ಶಾಲೆಯ ಆವರಣದಲ್ಲಿ ಭಕ್ತರಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಸುಮಾರು 20 ಸಾವಿರ ಜನ ಉಪಹಾರ ಮಾಡಿದರೆ, ಬೆಳಗ್ಗೆ 10 ಗಂಟೆಯಿಂದಲೇ ಭಕ್ತರಿಗೆ ಊಟ ನೀಡಲಾಗುತ್ತಿದೆ. ತಮಿಳುನಾಡಿನ ಸೇಲಂ, ಪುದುಚೇರಿ, ಕೇರಳದ ಕಾಸರಗೋಡು, ಕಣ್ಣೂರು, ಆಂಧ್ರದ ಅನಂತಪರ, ಕರ್ನೂಲು, ತೆಲಂಗಾಣದ ಕಮ್ಮಾರೆಡ್ಡಿ, ಸಂಗಾರೆಡ್ಡಿ ಜಿಲ್ಲೆ ಸೇರಿದಂತೆ ರಾಜ್ಯದ ಕೊಲಾರ, ಮಂಡ್ಯ, ಮೈಸೂರು ಸೇರಿದಂತೆ ನಾನಾ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದಾರೆ.
ಸುಮಾರು 40 ಸಾವಿರಕ್ಕೂ ಅಧಿಕ ಜನ ಬೆಳಗ್ಗೆ 10 ರಿಂದ ಎರಡು ಗಂಟೆವರೆಗೂ ಊಟ ಮಾಡಿದ್ದಾರೆ. ಭಕ್ತರ ಸಂಖ್ಯೆ ಕೊಂಚ ಇಳಿಮುಖವಾಗುತ್ತಿದೆ ಎಂದು ಆಹಾರ ವಿಭಾಗದ ಜವಾಬ್ದಾರಿ ವಹಿಸಿಕೊಂಡಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 23 ರಿಂದ 24 ರವರೆಗೆ ಒಟ್ಟು ಒಂದು ಲಕ್ಷಕ್ಕೂ ಅಧಿಕ ಭಕ್ತರು ಅಂಜನಾದ್ರಿಗೆ ಭೇಟಿ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ಜಿ. ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ನಲೀನ್ ಅತುಲ್ ಸೇರಿದಂತೆ ಹಲವರು ಅಂಜನಾದ್ರಿಗೆ ಭಾನುವಾರ ಭೇಟಿ ನೀಡಿದರು.
ಇದನ್ನೂ ಓದಿ : ಅದ್ಧೂರಿ ಹನುಮಮಾಲಾ ವಿರಮಣ: ಅಂಜನಾದ್ರಿಯಲ್ಲಿ ಭಕ್ತಸಾಗರ