ಕುಷ್ಟಗಿ /ಕೊಪ್ಪಳ: ಕುಷ್ಟಗಿ ಪಟ್ಟಣದಲ್ಲಿ ಗ್ರಾಮ ಸಿಂಹಗಳು ಎಂದೇ ಕರೆಯಲ್ಪಡುವ ಬೀದಿನಾಯಿಗಳ ಪಾರುಪತ್ಯ ಕಂಡು ಬಂದಿದೆ. ಇವುಗಳನ್ನು ನಿಯಂತ್ರಿಸಲು ಪುರಸಭೆ ಸಂಪೂರ್ಣ ವಿಫಲವಾಗಿದೆ ಎನ್ನುವ ಆರೋಪವೂ ಇದೆ.
ಪಟ್ಟಣದ ಹಳೆ ಪ್ರವಾಸಿ ಮಂದಿರದ ಎದುರಿನ ಚಿಕನ್ ಸೆಂಟರ್ಗಳ ಮುಂದೆ ನಿತ್ಯ ಬೀದಿ ನಾಯಿಗಳು ಜಮಾಯಿಸುತ್ತಿದ್ದು, ರಸ್ತೆ ಮದ್ಯೆ ಗುಂಪು ಗುಂಪಾಗಿ ಓಡಾಡುವುದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಅಡಚಣೆ ಉಂಟಾಗುತ್ತಿದೆ.
ಕೆಲ ನಾಯಿಗಳು ಚಲಿಸುವ ಬೈಕ್ ಅನ್ನು ಬೆನ್ನಟ್ಟಿಕೊಂಡು ಹೋಗುವ ಮೂಲಕ ಭಯ ಹುಟ್ಟಿಸಿವೆ. ಚಿಕನ್ ಸೆಂಟರ್ ನಲ್ಲಿ ಎಸೆಯುವ ತುಂಡು ಮಾಂಸಕ್ಕಾಗಿ ರಸ್ತೆಯಲ್ಲಿ ನಾಯಿಗಳು ಜಮಾಯಿಸುತ್ತಿದ್ದು, ಈ ಕುರಿತು ಪುರಸಭೆ ಅಧಿಕಾರಿಗಳನ್ನು ವಿಚಾರಿಸಿದರೆ ಕೊರೊನಾ ಕಾರಣ ನೀಡಿ ನುಣುಚಿಕೊಳ್ಳುತ್ತಿದ್ದಾರೆ.
ಇನ್ನು ಕೃಷ್ಣಗಿರಿ ಕಾಲೋನಿ, ಹಳೆ ಬಜಾರ್ ಇತರೆಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.