ಕುಷ್ಟಗಿ /ಕೊಪ್ಪಳ : ಕೋವಿಡ್ 19 ಹಿನ್ನೆಲೆ ಅಟೋ ಚಾಲಕರ ಬದುಕು ಅತಂತ್ರ ಸ್ಥಿತಿಯಲ್ಲಿದ್ದು, ಅವರಿಗೆ ಜೀವನ ಭದ್ರತೆ ಕಲ್ಪಿಸಲು ವಸತಿ ಯೋಜನೆಯಡಿ ಸೂರು ಕಲ್ಪಿಸಬೇಕೆಂದು ಒತ್ತಾಯಿಸಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮತ್ತು ತಹಶೀಲ್ದಾರ್ ಅವರಿಗೆ ಶಂಕರನಾಗ್ ಅಟೋ ಚಾಲಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಕೋವಿಡ್ ವೈರಸ್, ಲಾಕ್ ಡೌನ್ ಕಾರಣದಿಂದಾಗಿ ಅಟೋ ಚಾಲಕರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ದಿನದ ದುಡಿಮೆ 200 ರೂಪಾಯಿಯಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ನಿಭಾಯಿಸುವುದು ಸಾಧ್ಯವಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಾರ್ವಜನಿಕರ ಸೇವೆಯಲ್ಲಿರುವ ಬಹುತೇಕ ಅಟೋ ಚಾಲಕರಿಗೆ ಸ್ವಂತ ಸೂರು ಇಲ್ಲ, ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ನಿಡಶೇಷಿ ಬಳಿ ಉಪ ನಗರಕ್ಕಾಗಿ 53 ಎಕರೆ ಜಾಗ ಖರೀದಿಸಿ ನಿವೇಶನ ವಿನ್ಯಾಸಗೊಳಿಸಲಾಗುತ್ತಿದೆ. ಇದರಲ್ಲಿ ಕುಷ್ಟಗಿ ಅಟೋ ಚಾಲಕರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಸಂಘದ ಅಧ್ಯಕ್ಷ ದುರಗಪ್ಪ ಡಂಬರ್, ಶೆಮ್ ಸೀರ್ ಖಾನ್, ಸಯ್ಯದ್ ಅಟೋ ಮುಂತಾದವರು ಉಪಸ್ಥಿತರಿದ್ದರು.