ಕುಷ್ಟಗಿ (ಕೊಪ್ಪಳ): ತಾಲೂಕಿನ ಚಳಗೇರಾ ಅಂಗನವಾಡಿ ಕೇಂದ್ರದ ಸಹಾಯಕಿ ಕಳೆದ ಮೇ. 23ರಂದು ಅಕ್ರಮವಾಗಿ ಆಹಾರ-ಧಾನ್ಯ ಸಾಗಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಡಿಪಿಓ ಇಲಾಖೆ ಏಕಪಕ್ಷೀಯವಾಗಿ ವರದಿ ನೀಡಿದೆ ಎಂದು ತಾ.ಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅಕ್ರಮವಾಗಿ ಆಹಾರ ಧಾನ್ಯ ಸಾಗಿಸಲು ಯತ್ನಿಸಿದ ಪ್ರಕರಣದಲ್ಲಿ ಸಹಾಯಕಿಯನ್ನ ಮಾತ್ರ ಪರಿಗಣಿಸಲಾಗಿದ್ದು, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ಸಹಾಯಕಿಯನ್ನ ಮಾತ್ರ ಬಲಿಪಶು ಮಾಡಿ, ಅವರ ಕೆಲಸ ಕಿತ್ತುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಡಿಪಿಓ ನೀಡಿದ ಏಕಪಕ್ಷೀಯ ವರದಿಯನ್ನ ತಾ.ಪಂ ಸದಸ್ಯರು ಒಪ್ಪುವುದಿಲ್ಲ. ಈ ವಿಷಯವಾಗಿ ತಾ.ಪಂ ಅಧ್ಯಕ್ಷೆ ಮಹಾಂತಮ್ಮ ಪೂಜಾರಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯಿಂದ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಪ್ರಭಾರಿ ಸಿಡಿಪಿಓ ಜಯಶ್ರೀ ಈ ವಿಚಾರವಾಗಿ ವಾಸ್ತವ ವರದಿ ನೀಡಿರುವುದಾಗಿ ಸಮರ್ಥಿಸಿಕೊಂಡರಾದರೂ, ತಾ.ಪಂ ಸದಸ್ಯರು ಅವರ ಮಾತನ್ನ ಒಪ್ಪಲಿಲ್ಲ.