ಕುಷ್ಟಗಿ (ಕೊಪ್ಪಳ): ಜಿಲ್ಲೆಯ ಕುಷ್ಟಗಿ ಪಟ್ಟಣದ ಮೂಲಕ ಹಾದು ಹೋಗುವ ನೈರುತ್ಯ ರೈಲ್ವೆ ವಿಭಾಗದ ಉದ್ದೇಶಿತ ಗದಗ - ವಾಡಿ ರೈಲ್ವೆ ಮಾರ್ಗದ ಹಿನ್ನೆಲೆಯಲ್ಲಿ ಕುಷ್ಟಗಿ ಪುರಸಭೆ 1ನೇ ವಾರ್ಡ್ ವ್ಯಾಪ್ತಿಯ ಸಂತ ಶಿಶುನಾಳ ಷರೀಫ್ ಕಾಲೋನಿಯ 3 ಎಕರೆಯಲ್ಲಿ 25 ಗುಂಟೆ ಭೂ ಸ್ವಾಧೀನವಾಗಿದೆ. ಅಲೆಮಾರಿ ಬುಡಕಟ್ಟು ವಾಸವಿರುವ ಈ ಕಾಲೋನಿಯಲ್ಲಿ 34 ಕುಟುಂಬಗಳಿಗೆ ಭೂ ಸ್ವಾಧೀನದ ನಿವೇಶನದ ಪರಿಹಾರವೂ ದೊರಕಿದೆ. ಸರ್ಕಾರ ಕೊಟ್ಟ ನಿವೇಶನ ಸರ್ಕಾರವೇ ಕಸಿದುಕೊಂಡಿದೆ. ರೈಲು ಮಾರ್ಗಕ್ಕೆ ನಿವೇಶನ ಕೊಟ್ಟ ಈ ಕುಟುಂಬಗಳಿಗೆ ಭವಿಷ್ಯದ ವಸತಿ ಪ್ರಶ್ನಾರ್ಥಕವಾಗಿದೆ.
ಸರ್ಕಾರ ಅಲೆಮಾರಿ ಬುಡಕಟ್ಟು ಸಮುದಾಯಕ್ಕಾಗಿ 2008ರಲ್ಲಿ ಸ.ನಂ. 59/3 ಜಮೀನು 3 ಎಕರೆ ಖರೀದಿಸಿ 109 ನಿವೇಶನಗಳನ್ನು ಹಂಚಿಕೆ ಮಾಡಿತ್ತು. ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಬ್ಯಾಂಕಿನ ಆರ್ಥಿಕ ಸಹಾಯವೂ ಮಾಡಿತ್ತು. ಈ ವಸತಿ ಪ್ರದೇಶದಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಕ್ಕೆ ಸೇರಿದ ಹಾವಾಡಿಗ, ಸುಡುಗಾಡು ಸಿದ್ದರು, ಬುಡ್ಗಾ ಜಂಗಮ, ಚನ್ನದಾಸರು ಇತ್ಯಾದಿ ಜನ ಸಮುದಾಯ ವಾಸವಾಗಿದ್ದು, ಪುರಸಭೆಯಿಂದ ಮೂಲಸೌಕರ್ಯಗಳನ್ನು ನೀಡುತ್ತಿದೆ. ಒಂದೆಡೆ ನೆಮ್ಮದಿ ಜೀವನ ನಡೆಸುತ್ತಿರುವಾಗಲೇ ನಾಲ್ಕೈದು ವರ್ಷಗಳಲ್ಲಿ ಗದಗ - ವಾಡಿ ರೈಲು ಮಾರ್ಗವು ಕೆಲವು ಕುಟುಂಬಗಳನ್ನು ನಿದ್ದೆಗೆಡಿಸಿದೆ.
ಗದಗ - ವಾಡಿ ರೈಲು ಮಾರ್ಗವು ಸಂತ ಶಿಶುನಾಳ ಷರೀಪ್ ಕಾಲೋನಿ ಪಕ್ಕದಲ್ಲಿದೆ. ಈ ಹಿನ್ನೆಲೆಯಲ್ಲಿ ಕೆಐಡಿಬಿ 28 ಗುಂಟೆ ಜಮೀನು ರೈಲು ಮಾರ್ಗಕ್ಕೆ ಸ್ವಾಧೀನಪಡಿಸಿಕೊಂಡಿದ್ದು ಇದರಲ್ಲಿ 34 ಮನೆ ಸೇರಿದಂತೆ ಪ್ರಾಥಮಿಕ ಶಾಲೆ, ಅಂಗನವಾಡಿ ಕಟ್ಟಡ ಸೇರಿದೆ. ಇದೀಗ ಗದಗ-ವಾಡಿ ರೈಲು ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ರೈಲ್ವೆ ಸಿಬ್ಬಂದಿ ವಸತಿ ಗೃಹಗಳು ಭರದಿಂದ ಸಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರೈಲು ಮಾರ್ಗ ನಿರ್ಮಾಣಗೊಳ್ಳಲಿದೆ. ಆದರೆ ರೈಲ್ವೆ ಮಾರ್ಗಕ್ಕೆ ತಮ್ಮ ನಿವೇಶನ ಬಿಟ್ಟು ಕೊಟ್ಟ 34 ಕುಟುಂಬಗಳು ಇದ್ದಕ್ಕಿದ್ದಂತೆ ಎಲ್ಲಿಗೆ ಹೋಗುವುದು ಎಂಬ ಚಿಂತೆಯಲ್ಲಿವೆ.
ಕೊರೊನಾ ಲಾಕ್ಡೌನ್ ಪರಿಹಾರ ಖಾಲಿ: 34 ನಿವೇಶನದಾರರಿಗೆ ತಲಾ 3ಲಕ್ಷ ರೂ ಭೂಸ್ವಾಧೀನದ ನಿವೇಶನದ ಪರಿಹಾರ ಸಿಕ್ಕಿದೆ. ಸಾಲ ಮಾಡಿ ಮನೆ ಕಟ್ಟಿಸಿದ್ದು, ಮನೆಗಳಿಗೆ ಪರಿಹಾರ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ. ಕಳೆದ ಕೊರೊನಾ ಹಿನ್ನೆಲೆಯಲ್ಲಿ ಕೆಐಡಿಬಿ ನೀಡಿದ ಭೂಸ್ವಾಧೀನ ಪರಿಹಾರ ಮೊತ್ತ ಅಗತ್ಯ ಖರ್ಚು ವೆಚ್ಚಗಳಿಗೆ ಖಾಲಿಯಾಗಿದೆ. ಸದ್ಯ ದುಡಿದು ತಿನ್ನುವ ಪರಿಸ್ಥಿತಿ ಇದ್ದು, ಕೈ ಖಾಲಿಯಾದ ಪರಿಸ್ಥಿತಿಯಲ್ಲಿ ನಿವೇಶನ ಖರೀದಿ ಮಾಡಿ ಮನೆ ನಿರ್ಮಿಸುವುದು ಅಸಾಧ್ಯವಾಗಿದೆ. ಮತ್ತೆ ಜೋಪಡಿ ವಾಸವೇ ಗತಿಯಾಗಲಿದೆ. ಈ ಪ್ರದೇಶಕ್ಕೆ ಹೊಂದಿಕೊಂಡಿರುವ 28 ಗುಂಟೆ ಜಮೀನು ಖರೀದಿಸಿ 34 ಮನೆಗಳ ಫಲಾನುಭವಿಗಳಿಗೆ ವಿತರಿಸಬೇಕು. ಇಲ್ಲಿ ಬಿಟ್ಟು ಬೇರೆಡೆ ನಿವೇಶನ ತೋರಿಸಿದರೆ ನಾವೆಲ್ಲಿಗೂ ಹೋಗುವುದಿಲ್ಲ . ಕೊಪ್ಪಳ ಸಂಸದ ಕರಡಿ ಸಂಗಣ್ಣ ಜಿಲ್ಲಾಧಿಕಾರಿಗಳು ಮದ್ಯಸ್ಥಿಕೆ ವಹಿಸಿದರೆ ಪರಿಹಾರ ಸಾಧ್ಯವಿದೆ ಎನ್ನುತ್ತಾರೆ ಅಲೆಮಾರಿ ಬುಡಕಟ್ಟು ಸಮಾಜದ ಅಧ್ಯಕ್ಷ ಮಹಿಬೂಬುಸಾಬ್ ಹಾವಾಡಿಗ.