ಕುಷ್ಟಗಿ (ಕೊಪ್ಪಳ): ಇಲಕಲ್, ಹುನಗುಂದ ಶಾಲಾ - ಕಾಲೇಜುಗಳ ಆರಂಭ - ಬಿಡುವಿನ ಅವಧಿಯಲ್ಲಿ ಇಲಕಲ್ ಬಸ್ ಡಿಪೋ ಬಸ್ಗಳ ವೇಳೆ ಬದಲಾವಣೆಯಾಗಿದ್ದು, ದೋಟಿಹಾಳ, ಕೇಸೂರು, ಬಿಜಕಲ್, ಮುದೇನೂರು ವಿದ್ಯಾರ್ಥಿಗಳಿಗೆ ತೊಂದರೆಯಾದ ಪರಿಣಾಮ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಲಕಲ್, ಹುನಗುಂದ ಶಾಲಾ ಕಾಲೇಜುಗಳಿಗೆ ದೋಟಿಹಾಳ, ಕೇಸೂರು, ಬಿಜಕಲ್, ಮುದೇನೂರು, ಶಿರಗುಂಪಿ, ಮೇಗೂರು ಸೇರಿದಂತೆ ಇತರ ಗ್ರಾಮಗಳ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇಲಕಲ್ ಬಸ್ ಡಿಪೋದ ಪಾಸ್ ಪಡೆದಿದ್ದಾರೆ. ಆದರೆ ಶಾಲಾ-ಕಾಲೇಜು ಆರಂಭ ಮತ್ತು ಬಿಡುವಿನ ವೇಳೆಗೆ ಇದ್ದ ಇಲಕಲ್-ದೋಟಿಹಾಳ- ಕುಷ್ಟಗಿ ಬಸ್ಗಳ ವೇಳೆಯನ್ನು ಇದ್ದಕ್ಕಿದ್ದಂತೆ ಬದಲಿಸಲಾಗಿದೆ. ಇಲಕಲ್ ಡಿಪೋದ ಈ ನಡೆಯಿಂದಾಗಿ ಕುಷ್ಟಗಿ ಡಿಪೋದ ಬಸ್ಗಳನ್ನು ಅವಲಂಬಿಸುವಂತಾಗಿದೆ. ಶಾಲಾ - ಕಾಲೇಜು ಆರಂಭದ ಹೊತ್ತಿಗೆ ಬಸ್ಗಳು ಲಭ್ಯವಾಗದ ಹಿನ್ನೆಲೆ, ದೋಟಿಹಾಳದಲ್ಲಿ ಏಕಾಏಕಿ ಕುಷ್ಟಗಿ ಬಸ್ ತಡೆದು ಪ್ರತಿಭಟಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಜಿ.ಪಂ. ಸದಸ್ಯ ಕೆ. ಮಹೇಶ ಅವರು ಆಗಮಿಸಿ ಕುಷ್ಟಗಿ ಬಸ್ ಡಿಪೋ ಅಧಿಕಾರಿಗಳನ್ನು ಕರೆಸಿ, ವಾಸ್ತವ ಸಮಸ್ಯೆ ವಿವರಿಸಿದ್ದಾರೆ. ಕುಷ್ಟಗಿ ಡಿಪೋದವರು ಸ್ಪಂದಿಸಿದ್ದಾರೆ, ಆದರೆ, ಇಲಕಲ್ ಡಿಪೋ ಸ್ಪಂದಿಸಿಲ್ಲ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: ಇಂದು ಸಂಜೆ ಸಚಿವ ಸಂಪುಟದ ಉಪ ಸಮಿತಿ ಸಭೆ.. ಕಡಲೆಕಾಳು, ತೊಗರಿ ಖರೀದಿ ಕುರಿತು ಚರ್ಚೆ
ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷ ಬಸನಗೌಡ ಪೋಲಿಸ ಪಾಟೀಲ ಅವರು, ಕುಷ್ಟಗಿ ತಾಲೂಕಿನ ವಿದ್ಯಾರ್ಥಿಗಳು ಇಲಕಲ್ ಡಿಪೋದಿಂದ ಬಸ್ ಪಾಸ್ ಪಡೆದಿದ್ದು, ಶಾಲಾ ಅವಧಿಯಲ್ಲಿ ಇಲಕಲ್ ಡಿಪೋದಿಂದ ಬಸ್ಗಳನ್ನು ಬಿಡಬೇಕು. ಇಲ್ಲವಾದಲ್ಲಿ ಇಲಕಲ್ ಬಸ್ಗಳಿಗೆ ಘೇರಾವ್ ಹಾಕಿ ಪ್ರತಿಭಟಿಸಲಾಗುವುದು. ಬಸ್ ಸೇವೆ ನೀಡದೇ ಇದ್ದಲ್ಲಿ ಬಸ್ ಪಾಸ್ಗೆ ನೀಡಿದ ಹಣವನ್ನು ಮರಳಿ ಪಾವತಿಸಿಕೊಳ್ಳಬೇಕಾದೀತು ಎಂದು ಎಚ್ಚರಿಸಿದ್ದಾರೆ. ಇಲಕಲ್ ಡಿಪೋ ವರ್ತನೆ ಅಧಿಕ ಪ್ರಸಂಗತನದಿಂದ ಕೂಡಿದ್ದು, ಸಾರಿಗೆ ಸಚಿವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.