ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಉತ್ತಮ ಮಳೆಗೆ, ಸಣ್ಣಪುಟ್ಟ ಕೆರೆ ಕುಂಟೆ, ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡಿದ್ದು, ರೈತರ ಮೊಗದಲ್ಲಿ ಖುಷಿ ಅರಳಿಸಿದೆ.
ತಾಲೂಕಿನ ಎರೆಹಳ್ಳ ತುಂಬಿ ಹರಿದಿದ್ದು, ಜುಮ್ಲಾಪುರ, ಹುಲಿಯಪೂರ ಸಂಪೂರ್ಣ ಭರ್ತಿಯಾಗಿದೆ. ಅಲ್ಲದೇ, ಮುದೇನೂರು ಬಳಿಯ ಬನ್ನಟ್ಟಿಯ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕುಷ್ಟಗಿ ಪಟ್ಟಣ ವ್ಯಾಪ್ತಿಯ ರಾಜಕಾಲುವೆ, ಚರಂಡಿಗಳು ತುಂಬಿ ಹರಿದಿವೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರವಿವಾರದ ವಾರದ ಸಂತೆ, ಜಾನುವಾರು ಸಂತೆ ಅಸ್ತವ್ಯಸ್ತವಾಗಿದೆ.
ಕಳೆದ ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಉತ್ತಮ ಹಸ್ತ ಮಳೆಯಾಗಿದೆ. ಈ ಹಿನ್ನಲೆ ರೈತರು ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಬಿಳಿಜೋಳ, ಕಡಲೆ, ಗೋದಿ ಬಿತ್ತನೆ ಕೈಗೊಂಡ ರೈತರಿಗೆ ಶನಿವಾರದ ಚಿತ್ತ ಮಳೆ ಇನ್ನಷ್ಟು ಅನುಕೂಲವೇ ಆಗಿದೆ.
ತಾಲೂಕಿನ ದೋಟಿಹಾಳದಲ್ಲಿ 70.3 ಮಿ.ಮೀ., ಹನುಮಸಾಗರ 40.2 ಮಿ. ಮೀ., ಕುಷ್ಟಗಿ 36.6 ಮಿ. ಮೀ., ತಾವರಗೇರಾ 18.0 ಮಿ. ಮೀ., ಕಿಲ್ಲಾರಹಟ್ಟಿ 16.04 ಮಿ.ಮೀ. 15.8 ಮಿ.ಮೀ. ನಷ್ಟು ಮಳೆ ಬಿದ್ದಿದೆ.