ಕುಷ್ಟಗಿ (ಕೊಪ್ಪಳ): ಮುಂಗಾರು ಹಂಗಾಮಿಗೆ ತಾಲೂಕಿನ ನಾನಾ ಪ್ರದೇಶಗಳಲ್ಲಿ ಹೆಸರು ಬಿತ್ತನೆಯಾಗಿದೆ. ಆದ್ರೆ, ಹಸಿರು ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.
ಬಿತ್ತನೆಯಾದ 80 ದಿನಗಳಲ್ಲಿ ಕಟಾವಿಗೆ ಬರುವ ಹೆಸರು ಬೆಳೆಗೆ ವಾತಾವರಣದಲ್ಲಿನ ವೈಪರೀತ್ಯಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆ. ಸತತ ಮೋಡ ಕವಿದ ವಾತಾವರಣ ಇದ್ದರೆ ರೋಗ ಬಾಧೆ ಹೆಚ್ಚಾಗಿ ಕಾಡುತ್ತದೆ.
ತಾಲೂಕಿನ ನಾನಾ ಕಡೆ ಹೆಸರು ಬೆಳೆಗೆ ಹಳದಿ ಎಲೆ (ಬಾಣಂತಿ) ರೋಗ ಕಾಣಿಸಿಕೊಂಡಿದೆ. ಹೆಸರು ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕಾಯಿಕಟ್ಟುವಿಕೆ ಸ್ಥಗಿತವಾಗುತ್ತಿದೆ. ಆರಂಭದಲ್ಲಿ ಹೊಲದ ಕೆಲ ಭಾಗದಲ್ಲಷ್ಟೇ ಕಾಣಿಸಿಕೊಂಡ ಈ ರೋಗ ನಂತರ ಇಡೀ ಹೊಲಕ್ಕೆ ವ್ಯಾಪಿಸುತ್ತಿದೆ.
ವೈರಸ್ ಮೂಲದ ರೋಗ ಇದಾಗಿದ್ದು, ವೈರಸ್‌ಗಳು ಗಾಳಿಯಲ್ಲಿ ಹಾರುವುದರಿಂದ ಪಕ್ಕದ ಹೊಲಗಳಿಗೂ ಈ ರೋಗ ವ್ಯಾಪಿಸುತ್ತದೆ. ಕೆಲ ಹೊಲಗಳಲ್ಲಿ ಮೊಗ್ಗು ಮತ್ತು ಕುಡಿಗೆ ಕರಿಶೀರುಗಳು ಮೆತ್ತಿರುವುದು ಕಂಡುಬಂದಿದೆ. ಕರಿಶೀರುಗಳು ರಸ ಹೀರುವುದರಿಂದ ಬಳ್ಳಿಯ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಇಲ್ಲಿನ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ತಾಲೂಕಿನ ಹಿರೇಮನ್ನಾಪುರ, ಕೇಸೂರು, ಹೆಸರೂರು ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಹಳದಿ ಎಲೆ ರೋಗ ವೈರಸ್ ಮೂಲದಿಂದ ಬರುತ್ತದೆ. ಆರಂಭದಲ್ಲಿ ಹೊಲದಲ್ಲಿನ 1-2 ಗಿಡಗಳಲ್ಲಿ ಇದು ಕಾಣಿಸಿಕೊಂಡಾಗ ಕೂಡಲೇ ರೋಗಪೀಡಿತ ಗಿಡಗಳನ್ನು ಕಿತ್ತು ಸುಡಬೇಕು. ನಂತರ ಬೆಳೆಗೆ ಪ್ರತಿ ಲೀಟರ್ ನೀರಿಗೆ 0.5 ಎಂ.ಎಲ್. ಇಮುಡಾಕ್ಲೋಪಿಡ್ ಸಿಂಪಡಿಸಬೇಕು ಎಂದು ತಿಳಿಸಿದರು.
ಕಳೆದ ಒಂದು ವಾರದಲ್ಲಿ ಬೆಳೆಗೆ ಇಂಥ ರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ.