ಕುಷ್ಟಗಿ: ತಾಲೂಕಿನಲ್ಲಿ ವ್ಯಾಪಕವಾಗಿ ಅಲ್ಲಲ್ಲಿ ರೋಹಿಣಿ ನಕ್ಷತ್ರ ಮಳೆಯಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ರೈತರು ಬಿತ್ತನೆ ಬೀಜ ಖರೀದಿಸಿಲು ರೈತ ಸಂಪರ್ಕ ಕೇಂದ್ರದತ್ತ ಮುಖ ಮಾಡಿದ್ದಾರೆ.
ಕಳೆದ ಸೋಮವಾರ ಸುರಿದ ಮಳೆಯಿಂದ ಬಿತ್ತನೆಗೆ ಪೂರಕವಾಗುವಷ್ಟು ಹಸಿಯಾಗಿದೆ. ಬಿತ್ತನೆ ಕಾರ್ಯ ಚಟುವಟಿಕೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ರೈತರು ಸಜ್ಜೆ ಬಿತ್ತನೆಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಶಕ್ತಿಮಾನ್ ಬೀಜಗಳಾದ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ತೊಗರಿ, ಹೆಸರು ದಾಸ್ತಾನು ಇದೆ. ಪ್ರತಿ ವರ್ಷ 26 ಕ್ವಿಂಟಲ್ ಸರಾಸರಿ ಮಾರಾಟವಾಗುತ್ತಿತ್ತು. ಆದರೆ, ಈ ಬಾರಿ 50 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದ್ದು, ಇನ್ನು 15 ಕ್ವಿಂಟಲ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 31 ಕ್ವಿಂಟಲ್ ತೊಗರಿ ದಾಸ್ತಾನು ಇದ್ದು ಲಘು ಪೋಷಕಾಂಶ ಬೋರೆಕ್ಸ್, ಜಿಂಕ್ ಹಾಗೂ ಬೀಜೋಪಚಾರಕ್ಕೆ ಟ್ರೈಕೋಡರ್ಮ್ ಲಭ್ಯವಿದೆ.
ಈ ಬಾರಿ ಬಿಟಿ ಹತ್ತಿ ಬಿತ್ತನೆ ಮಾಡುತ್ತಿದ್ದು, ರೈತರು ಬೀಜೋಪಚಾರ ಮಾಡಿ ಬಿತ್ತನೆ ಮಾಡುವಂತೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಬಾಲಪ್ಪ ಜಲಗೇರಿ, ರಾಘವೇಂದ್ರ ಕೊಂಡಗುರಿ ಸಲಹೆ ನೀಡಿದರು. ಇನ್ನು ತಾಲೂಕಿನ ತೆಗ್ಗಿಹಾಳ ಗ್ರಾಮದ ರೈತ ಗಿರೇಗೌಡ ಈ ಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿ, ಈ ಬಾರಿ ಮಳೆಯಿಂದ ಸಾಕಷ್ಟು ಭೂಮಿ ಹಸಿಯಾಗಿದ್ದು, ಬಿತ್ತನೆಗೆ ಸಕಾಲವಾಗಿದೆ ಎಂದು ತಿಳಿಸಿದರು.