ಗಂಗಾವತಿ(ಕೊಪ್ಪಳ): ಮಧ್ಯರಾತ್ರಿ ಸಾರಿಗೆ ಸಂಸ್ಥೆಯ ಬಸ್ ಗೆ ಅಡ್ಡಲಾಗಿ ಬಂದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಇಲ್ಲಿನ ಕನಕದಾಸ ವೃತ್ತಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಪರಿಣಾಮ ಕನಕದಾಸ ವೃತ್ತ ಸಂಪೂರ್ಣ ಹಾನಿಯಾಗಿದೆ. ಅದೃಷ್ಟ ವಶಾತ್ ಎದುರಿಗೆ ಇದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಬಸ್ ಡಿಕ್ಕಿಯಾಗುವುದನ್ನು ತಪ್ಪಿಸಿದ ಚಾಲಕ ಸಂಭಾವ್ಯ ಅಪಘಾತವನ್ನು ತಡೆದಿದ್ದಾನೆ.
ರಾಯಚೂರಿನಿಂದ ಕೊಪ್ಪಳಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ವಾಹನ ಮಧ್ಯರಾತ್ರಿ 2.30ಕ್ಕೆ ಗಂಗಾವತಿಗೆ ಬಂದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕೊಪ್ಪಳ ಘಟಕದ ಚಾಲಕ ವೆಂಕಪ್ಪ ಸೇರಿದಂತೆ ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಸಾರಿಗೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಒಂದು ವೇಳೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ವಾಹನ ಡಿಕ್ಕಿಯಾಗಿದ್ದರೆ ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ : 'ಮದುವೆ ಉದ್ದೇಶದೊಂದಿಗೆ ಸಹಮತದ ದೈಹಿಕ ಸಂಬಂಧ ಲೈಂಗಿಕ ದೌರ್ಜನ್ಯವಲ್ಲ'