ಕೊಪ್ಪಳ: ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನೇ ತನ್ನ ಧ್ಯೇಯ ಮಾಡಿಕೊಂಡಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ಕೊರೊನಾ ತಾಂಡವವಾಡುತ್ತಿದೆ. ಆದರೆ ಸರ್ಕಾರ ಕೊರೊನಾ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಮಹಿಳೆಯರು, ಮಕ್ಕಳು, ರೈತರ ಹಾಗೂ ಸಾಮಾನ್ಯ ಜನರ ಹಿತ ಕಾಯಬೇಕಾದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರೈತರಿಗೆ ಸರಿಯಾಗಿ ಬೀಜ, ಗೊಬ್ಬರ ಸಿಗುತ್ತಿಲ್ಲ. ಮಹಿಳೆಯರ ಬಗ್ಗೆ ಮೋದಿ ಮಾತಾಡ್ತಾರೆ, ಆದರೆ ರಾಜ್ಯದಲ್ಲಿ ಬಾಲ್ಯ ವಿವಾಹ, ದೇವದಾಸಿ ಪದ್ಧತಿಯಂತಹ ಅನಿಷ್ಠ ಪದ್ಧತಿಗಳು ಮುಂದುವರೆದಿವೆ. ಮಹಿಳೆಯರ ಹಿತಕಾಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು ಎಂದರು. ಮೋದಿ ಸರ್ಕಾರ ಬರಿ ಜಾಹಿರಾತಿನಲ್ಲಿಯೇ ಸಮಯ ಕಳೆಯುತ್ತಿದೆ ಎಂದು ಗುಡುಗಿದ್ರು.
ಕುಷ್ಟಗಿ ತಹಶೀಲ್ದಾರ ಕಚೇರಿಯಲ್ಲಿ ಸಿಬ್ಬಂದಿಯೊಂದಿಗೆ ಈ ಹಿಂದಿನ ತಹಶೀಲ್ದಾರ್ ನಡೆದುಕೊಂಡ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಂತಹ ಮೇಲಾಧಿಕಾರಿಗಳು ಎಲ್ಲ ಕಡೆಯೂ ಇದ್ದಾರೆ. ಅಂತಹವರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ನೊಂದ ಆ ಮಹಿಳೆಗೆ ನಾವು ಮಾನಸಿಕವಾಗಿ ಸ್ಥೈರ್ಯ ತುಂಬುತ್ತೇವೆ ಎಂದರು.