ಕೊಪ್ಪಳ : ಬಿಜೆಪಿಗೆ ವಿರೋಧಪಕ್ಷದಲ್ಲಿ ಯಾರೆಲ್ಲ ಪ್ರಬಲರಿದ್ದಾರೆ ಮತ್ತು ಯಾರಿಂದ ತೊಂದರೆ ಆಗುತ್ತೆಯೋ ಅವರ ಮೇಲೆ ಇಡಿ ಪ್ರಯೋಗ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.
ನಗರದಲ್ಲಿ ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸೋನಿಯಗಾಂಧಿ, ರಾಹುಲ್ ಗಾಂಧಿ, ಚಿದಂಬರಂ ಸೇರಿದಂತೆ ನನ್ನಂತವರನ್ನು ಗುರುತಿಸಿ ಇಡಿ, ಸಿಬಿಐ ಉಪಯೋಗಿಸಿಕೊಂಡು ಪ್ರತಿದಿನ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ. ಅವರ ಆಟ ಇನ್ನೇನು ಬಹಳ ದಿನ ನಡೆಯುವುದಿಲ್ಲ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಸದ್ಯ ನಡೆದಿರುವ ಇವೆಲ್ಲವೂ ರಾಜಕೀಯ ಉದ್ದೇಶದಿಂದ ಆದ ಕೇಸ್ಗಳು. ಇವುಗಳನ್ನ ನಾವು ಸಮರ್ಥವಾಗಿ ಎದುರಿಸಲೇಬೇಕು. ಎದುರಿಸುತ್ತೇವೆ ಎಂದರು. ಪ್ರತಿದಿನ ಸಿಬಿಐ ನೋಟಿಸ್ಗಳು ಬರುತ್ತಿವೆ. ನಮ್ಮ ಕುಟುಂಬಕ್ಕೆ ಸೇರಿದಂತೆ ನನ್ನ ಸ್ನೇಹಿತರಿಗೂ ನೋಟಿಸ್ ಬರುತ್ತಿವೆ. ಈ ದೇಶದಲ್ಲಿ ಯಾರ ಮೇಲೂ ಡಿಸ್ ಅಪಿಯರ್ ಕೇಸ್ ಇಲ್ಲ. ನನ್ನೊಬ್ಬನ ಮೇಲೆ ಕೊಟ್ಟಿದ್ದಾರೆ. ಕೊಡಲಿ ನೋಡೋಣ. ನಮಗೂ ಒಂದು ಕಾಲ ಬರುತ್ತದೆ ನೋಡಿಕೊಳ್ಳುತ್ತೇವೆ ಎಂದರು.
ಅಗ್ನಿಪಥ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಗ್ನಿಪಥ ವಿರೋಧಿಸಿ ಈಗಾಗಲೇ ದೇಶ ಹೊತ್ತಿ ಉರಿಯುತ್ತಿದೆ. ಈ ದೇಶದ ಯುವಕರನ್ನು ಬಾಡಿಗಾರ್ಡ್ ಹಾಗೂ ಬಿಜೆಪಿ ಕಚೇರಿಗೆ ಸೆಕ್ಯುರಿಟಿ ಮಾಡಲು ಹೊರಟಿದ್ದಾರೆ. ಈ ಕೆಲಸಕ್ಕೆ ಬೇಕಾದರೆ ಮಂತ್ರಿಗಳ ಮಕ್ಕಳನ್ನು ಕಳುಹಿಸಲಿ. ನಮ್ಮ ಮಕ್ಕಳಿಗೆ ಇಂಜಿನಿಯರ್, ಡಾಕ್ಟರ್ಸ್ ಆಗಲಿಕ್ಕೆ ಉತ್ತಮ ಶಿಕ್ಷಣ ನೀಡಲಿ. ಮೊದಲು ಏನಿತ್ತೋ ಆ ಪದ್ಧತಿಯನ್ನು ಮುಂದುವರೆಸಲಿ ಎಂದರು.
ಓದಿ: ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ನಡೆದಿಲ್ಲ.. ಸಚಿವ ಮುರುಗೇಶ್ ನಿರಾಣಿ