ಕೊಪ್ಪಳ: ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದಾರೂಢಸ್ವಾಮಿ ರೈಲ್ವೆ ನಿಲ್ದಾಣ ಎಂದು ಮರು ನಾಮಕರಣವಾದ ಬಳಿಕ ಬೇರೆ ಜಿಲ್ಲೆಗಳಲ್ಲಿನ ರೈಲ್ವೆ ನಿಲ್ದಾಣಗಳಿಗೆ ಸ್ಥಳೀಯ ಪ್ರಸಿದ್ದ ಹೆಸರುಗಳ ನಾಮಕರಣ ಮಾಡುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.
ಈಗ ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿನ ರೈಲ್ವೆ ನಿಲ್ದಾಣಕ್ಕೆ ಶ್ರೀ ಗವಿಸಿದ್ದೇಶ್ವರ ರೈಲ್ವೆ ನಿಲ್ದಾಣ ಎಂದು ಮರು ನಾಮಕರಣ ಮಾಡುವ ಒತ್ತಾಯ ಜೋರಾಗಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತಿಗಳು, ಸಂಘ ಸಂಸ್ಥೆಗಳಿಂದ ಚರ್ಚೆ ಶುರುವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಶ್ರೀ ಗವಿಸಿದ್ದೇಶ್ವರ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡುವಂತೆ ಜನರು ಅಭಿಪ್ರಾಯ ಸಂಗ್ರಹಣೆಗೆ ಮುಂದಾಗುತ್ತಿದ್ದಾರೆ. ಕೊಪ್ಪಳದ ಗವಿಮಠ ಯಾವುದೇ ಒಂದು ಧರ್ಮದ ಜನರಿಗೆ ಸೀಮಿತವಾಗಿಲ್ಲ. ಸರ್ವಧರ್ಮದ ಸಮನ್ವತೆಯ ಪ್ರತೀಕವಾಗಿದೆ. ವಿಶೇಷ ಕಾರ್ಯಗಳ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿದೆ. ಶ್ರೀಮಠದ ಸಾಮಾಜಿಕ ಕಾರ್ಯಗಳು ಸಹ ನಿರಂತರವಾಗಿ ಮುಂದುವರೆದಿದೆ. ಈ ಭಾಗದ ಲಕ್ಷಾಂತರ ಜನರ ಶ್ರದ್ಧೆಯ ತಾಣವಾಗಿರುವ ಶ್ರೀ ಗವಿಮಠ ಪ್ರಖ್ಯಾತಿ ಪಡೆದಿದೆ. ಶ್ರೀ ಮಠದ ಕರ್ತೃವಾಗಿರುವ ಶ್ರೀ ಗವಿಸಿದ್ದೇಶ್ವರರ ಜಾತ್ರೆಯು ದಕ್ಷಿಣ ಭಾರತದ ಮಹಾ ಕುಂಭಮೇಳ ಎಂದು ಪ್ರಸಿದ್ದಿ ಪಡೆದಿದೆ. ಹೀಗಾಗಿ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಶ್ರೀ ಗವಿಸಿದ್ದೇಶ್ವರ ರೈಲ್ವೆ ನಿಲ್ದಾಣವೆಂದು ಮರುನಾಮಕರಣ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಜನರ ಈ ಅಭಿಪ್ರಾಯ ಸೂಕ್ತವಾಗಿದೆ ಎಂಬ ಅಭಿಪ್ರಾಯ ಬಲವಾಗಿದೆ. ಇನ್ನೊಂದು ಕಡೆ ಕೆಲ ಸಂಘಟನೆಗಳ ಮುಖಂಡರು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ಮುಂಡರಗಿ ಭೀಮರಾಯರ ಹೆಸರನ್ನು ಇಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಬಹಳಷ್ಟು ಜನರ ಒಲವು ಶ್ರೀ ಗವಿಸಿದ್ದೇಶ್ವರ ರೈಲ್ವೆ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಬಾರೆಯಾಗಿ ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣ ಮಾಡಬೇಕು ಎನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಬಲು ಜೋರಾಗಿದೆ.