ಕೊಪ್ಪಳ: ದೇಶದ ಬೆನ್ನೆಲುಬಾಗಿರುವ ರೈತರೆಲ್ಲರಿಗೂ ಸ್ವಂತ ಭೂಮಿ ಇರುವುದಿಲ್ಲ. ಆದರೂ ಕೃಷಿಯನ್ನೇ ಬದುಕಾಗಿಸಿಕೊಂಡ ರೈತರು ಸಾಗುವಳಿ ಭೂಮಿಯನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಾರೆ. ಆದರೆ, ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಗದೇ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವ ಅನೇಕ ನಿದರ್ಶನಗಳು ಇವೆ. ಆ ಗುತ್ತಿಗೆ ರೈತರ ಪರಿಸ್ಥಿತಿ ಕುರಿತ ವರದಿ ಇಲ್ಲಿದೆ.
ರೈತರು ಅದೆಷ್ಟೇ ಸಂಕಷ್ಟದಲ್ಲಿದ್ದರೂ ಕೃಷಿ ಬಿಡುವುದಿಲ್ಲ. ಅನೇಕ ರೈತರಿಗೆ ಭೂಮಿ ಇಲ್ಲದಿದ್ದರೂ ಭೂಮಿಯನ್ನು ಗುತ್ತಿಗೆ ಪಡೆದು ಸಾಗುವಳಿ ಮಾಡುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 2,52,500 ಹೆಕ್ಟೇರ್ ಸಾಗುವಳಿ ಭೂಮಿ ಇದೆ. ಜಿಲ್ಲೆಯ ಕೊಪ್ಪಳ ತಾಲೂಕಿನ ಕೆಲಭಾಗ, ಗಂಗಾವತಿ ಹಾಗೂ ಕಾರಟಗಿ ಭಾಗದಲ್ಲಿ ಒಂದಿಷ್ಟು ನೀರಾವರಿ ಇದೆ. ಶೇಕಡಾ 60 ರಿಂದ 70 ರಷ್ಟು ಭೂಮಿ ಮಳೆಯಾಶ್ರಿತ ಭೂಮಿಯಾಗಿದೆ.
ಸಾಮಾನ್ಯವಾಗಿ ಸ್ಥಳೀಯರ ಆಡು ಭಾಷೆಯಲ್ಲಿ ಭೂಮಿಯನ್ನು ಗುತ್ತಿಗೆ ಪಡೆದು ಸಾಗುವಳಿ ಮಾಡುವುದಕ್ಕೆ ಲಾವಣಿ ಅಥವಾ ಕೋರು ಎಂದು ಕರೆಯಲಾಗುತ್ತದೆ. ವರ್ಷಕ್ಕೆ ಇಂತಿಷ್ಟು ಹಣವನ್ನು ಅಥವಾ ಬೆಳೆದ ಬೆಳೆಯಲ್ಲಿ ಒಂದಿಷ್ಟು ಭಾಗವನ್ನು ನಿಗದಿಪಡಿಸಿಕೊಂಡು ಅನೇಕ ರೈತರು ಸಾಗುವಳಿ ಮಾಡುತ್ತಾರೆ.
ಲಾವಣಿ (ಲೀಸ್) ಪದ್ಧತಿ ಜಾಸ್ತಿ ಇರುವುದು ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿ ಭಾಗದಲ್ಲಿ. ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯಿಂದ ಸುಮಾರು 34 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗುತ್ತದೆ. ಈ ಭಾಗದಲ್ಲಿ ಹೆಚ್ಚು ಲಾವಣಿ ಪದ್ಧತಿಯಲ್ಲೇ ಜನರು ಕೃಷಿ ಮಾಡುತ್ತಾರೆ. ಹೀಗೆ ಲಾವಣಿ ಆಧಾರದಲ್ಲಿ ಕೃಷಿ ಮಾಡುವ ರೈತರು ಸಾಲಸೂಲ ಮಾಡಿಕೊಂಡು ಉತ್ತಿ ಬಿತ್ತಿದಾಗ ಕೆಲವೊಮ್ಮೆ ಅತಿವೃಷ್ಠಿ , ಅನಾವೃಷ್ಠಿಯಿಂದ ಹಾಗೂ ವಾತಾವಾರಣದ ವೈಪರೀತ್ಯಗಳಿಂದಾಗಿ ನಷ್ಟ ಅನುಭವಿಸುತ್ತಾರೆ.
ಮಾಡಿದ ಸಾಲ ತೀರಿಸಲಾಗದೇ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಸಹ ಜಿಲ್ಲೆಯಲ್ಲಿ ನಡೆದಿವೆ. ಅಲ್ಲದೆ ಈ ರೈತರು ಭೂಮಾಲೀಕರಾಗಿರದೇ ಇರುವುದರಿಂದ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ. ಕೃಷಿಯ ವಿವಿಧ ಯೋಜನೆಗಳ ಪ್ರೋತ್ಸಾಹ ಧನ, ಸಾಲಸೌಲಭ್ಯಗಳು ಭೂಮಿಯ ಮಾಲೀಕರಿಗೆ ಸಿಗುತ್ತವೆ ಹೊರತು ಗುತ್ತಿಗೆ ಆಧಾರದಲ್ಲಿ ಸಾಗುವಳಿ ಮಾಡುವ ರೈತರಿಗೆ ಸಿಗುವುದಿಲ್ಲ.
ಇದನ್ನೂ ಓದಿ: ಮಂಗಳೂರು: ಕೊರೊನಾ ಒತ್ತಡದ ನಡುವೆಯೂ ಸರ್ಕಾರಿ ನೌಕರರ ಚಿಕಿತ್ಸಾ ವೆಚ್ಚ ಭರಿಸಿದ ಸರ್ಕಾರ
ಹೀಗಾಗಿ ಕೆಲ ಸಂದರ್ಭದಲ್ಲಿ ಲಾವಣಿ ಆಧಾರದಲ್ಲಿ ಕೃಷಿ ಮಾಡುವ ರೈತರ ಬದುಕು ಶೋಚನೀಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಒಂದಿಷ್ಟು ಬದಲಾವಣೆಗಳನ್ನು ತರುವ ಮೂಲಕ ಅವರ ನೆರವಿಗೆ ಬರಬೇಕು ಎನ್ನುತ್ತಾರೆ ರೈತ ಸಂಘದ ಮುಖಂಡರು ಹಾಗೂ ಹೋರಾಟಗಾರರು.